National

ನೀರು ನಿಲ್ಲಿಸಿ ಸೇಡು ತೀರಿಸಿಕೊಂಡ ಡೆಪ್ಯೂಟಿ ಮೇಯರ್..?

ತಿರುಪತಿ: ಅಧಿಕಾರ ಇದ್ರೆ ಎಂತಹ ಹೀನ ಕೆಲಸ ಮಾಡಲು ಯೋಚನೆ ಮಾಡದ ಅಧಿಕಾರಿಗಳಿದ್ದಾರೆ. ಅಧಿಕಾರದ ದರ್ಪದಿಂದ ಸರ್ಕಾರಿ ನೌಕರರನ್ನು ಕಾಲು ಕಸವಾಗಿ ನಡೆಸಿಕೊಳ್ಳುವ ವಿಚಾರ ಹೊಸದೇನಲ್ಲ. ಇದಕ್ಕೆ ಉದಾಹರಣೆಯೆಂಬಂತೆ ತಿರುಪತಿಯಲ್ಲಿ ನಡೆದ ಘಟನೆ ಪೂರಕವಾಗಿದೆ. ತನ್ನನ್ನು ವಿಮಾನ ನಿಲ್ದಾಣದ ಒಳಗೆ ಬಿಡಲಿಲ್ಲ ಎಂಬ ಕಾರಣಕ್ಕೆ ತಿರುಪತಿ ಏರ್ಪೋರ್ಟ್‌ ಮತ್ತು ಅಲ್ಲಿನ ಸಿಬ್ಬಂದಿ ವಸತಿಗೃಹಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.

ಈತ ಶಾಸಕ ಪುತ್ರನೂ ಹೌದು ಜೊತೆಗೆ ತಿರುಪತಿ ಡೆಪ್ಯುಟಿ ಮೇಯರ್‌ ಕೂಡ ಆಗಿದ್ದಾರೆ. ಆಂಧ್ರಪ್ರದೇಶದ ಶಾಸಕ ಬಿ.ಕರುಣಾಕರ್​ ರೆಡ್ಡಿ ಪುತ್ರ ಅಭಿನಯ್​ ರೆಡ್ಡಿ ವಿರುದ್ಧ ನೀರು ಸ್ಥಗಿತಗೊಳಿಸರುವ ಆರೋಪ ಕೇಳಿಬಂದಿದೆ. ತಿರುಪತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯಮಟ್ಟದ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭಕ್ಕೆ ಸಚಿವ ಬೋತ್ಸಾ ಸತ್ಯನಾರಾಯಣರಿಗೆ ಆಹ್ವಾನವಿತ್ತು. ಅವರನ್ನು ಕರೆತರಲು ಅಭಿನಯ್‌ ರೆಡ್ಡಿ ಏರ್ಪೋರ್ಟ್‌ಗೆ ತೆರಳಿದ್ದಾರೆ. ಈ ವೇಳೆ ವಿಮಾನ ನಿಲ್ದಾಣ ಮ್ಯಾನೇಜರ್‌ ಸುನೀಲ್‌ ಹಾಗೂ ಮೇಯರ್‌ ನಡುವೆ ವಾಗ್ವಾದ ನಡೆದು ಅವರನ್ನು ಒಳಗೆ ಬಿಡದೆ ವಾಪಸ್‌ ಕಳಿಸಿದ್ದಾರೆ.

ಘಟನೆ ನಡೆದು ಕೆಲವೇ ಘಂಟೆಗಳಲ್ಲಿ ವಿಮಾಣ ನಿಲ್ದಾಣ ಮತ್ತು ವಸತಿ ನಿಲಯಗಳಿಗೆ ಪೂರೈಕೆಯಾಗುತ್ತಿದ್ದ ನೀರು ಸ್ಥಗಿತಗೊಂಡಿದೆ. ಇದಕ್ಕೆಲ್ಲಾ ಶಾಸಕನ ಮಗನೇ ಕಾರಣ ಎಂದು ಏರ್ಪೋರ್ಟ್‌ ಸಿಬ್ಬಂದಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಲಿಕೆ ನೀರಿನ ಪೈಪ್‌ ಲೈನ್‌ ಕಟ್ಟಾಗಿರುವುದರಿಂದ ನೀರು ನಿಂತಿದೆ ಎಂದು ಸಬೂಬು ಹೇಳಿದ್ದಾರೆ. ಆದ್ರೆ ಈ ಸುದ್ದಿ ಮಾತ್ರ ಟೀಕಿಸುವವರಿಗೆ ಜೇನು ಸಿಕ್ಕಿದಂತಾಗಿದೆ. ಇದು ವೈಎಸ್‌ಆರ್‌ಪಿಯ ಅರಾಜಕ ಆಡಳಿತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗುಡುಗಿದ್ದಾರೆ.

 

Share Post