ಬಾಲಕಿಗೋಸ್ಕರ ಊರಿಗೆ ಊರೇ ಬಂದು ಶಾಲೆ ಬಳಿ ನಿಂತಿದೆ..ಯಾಕಂತೀರಾ..?
ಬಿಹಾರ್: ಬಿಹಾರದ ಸೀತಾಮರ್ವಿ ಜಿಲ್ಲೆಯ ಡಬ್ ಟೋಲ್ ಗ್ರಾಮದಲ್ಲಿ ಬಾಲಕಿಯೊಬ್ಬಳು ಮುಂದೆ ಹೋಗುತ್ತಿದ್ದಂತೆ ಇಡೀ ಊರಿಗೆ ಊರೇ ಆಕೆಯನ್ನು ಹಿಂಬಾಲಿಸಿ ಬರುತ್ತಿದೆ. ಶಾಲೆ ಬಳಿಗೆ ಬಂದ ಕೂಡಲೇ ಹಿಂತಿರುಗಿ ಬಾಲಕಿ ನಮಸ್ಕಾರ ಮಾಡುತ್ತಾಳೆ. ಬಾಲಕಿಯನ್ನು ಕಂಡ ಊರಿನವರಿಗೆ ಸಂತೋಷಕ್ಕೆ ಪಾರವೇ ಇಲ್ಲದಂತಾಗದೆ.
ಕಾರಣ ಇಷ್ಟೇ ಇದುವರೆಗೂ ಆ ಊರಿನಲ್ಲಿ ಹತ್ತನೇ ತರಗತಿವರೆಗೆ ಯಾರೂ ವಿದ್ಯಾಭ್ಯಾಸ ಮಾಡಿಲ್ಲವಂತೆ. ಮೊದಲ ಬಾರಿಗೆ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿರುವ ಮೊದಲನೇ ಹುಡುಗಿ ಇವಳೇ ಆಗಿದ್ದಾಳೆ. ಹಾಗಾಗಿ ಅವಳನ್ನು ಸಪೋರ್ಟ್ ಮಾಡುತ್ತಾ ಊರಿನ ಜನರೆಲ್ಲಾ ಶಾಲೆ ಬಂದು ನಿಂತಿದ್ದಾರೆ.
ಅಭಿವೃದ್ದಿ ಎಂಬ ಪದಕ್ಕೆ ಕಿಲೋಮೀಟರ್ ದೂರ ಉಳಿದಿರುವ ಕುಗ್ರಾಮದಲ್ಲಿ ಇಂದಿರಾ ಕುಮಾರಿ ಎಲ್ಲಾ ಏಳು ಬೀಳುಗಳನ್ನು ದಾಟಿ ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿರುವುದಕ್ಕೆ ಎಲ್ಲರೂ ಶುಭ ಹಾರೈಸಿದ್ದಾರೆ. ಈ ವಿಚಾರ ಈಗ ಎಲ್ಲೆಡೆ ಜೋರಾಗಿ ಸುದ್ದಿಯಾಗ್ತಿದೆ. 900ಮಂದಿ ವಾಸವಾಗಿರುವ ಗ್ರಾಮದಲ್ಲಿನ ಜನ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವು ಹುಡುಗರು ಡಿಗ್ರಿ ಪೂರ್ತಿ ಮಾಡಿದ್ದಾದರೂ ಕೆಲಸಕ್ಕೆ ಹೋಗುವ ಪ್ರಯೋಜನ ಇಲ್ಲವಂತೆ. ಇವರ ಕತೆಯೇ ಹೀಗಾದರೆ ಇನ್ನು ಹೆಣ್ಣು ಮಕ್ಕಳ ಕತೆ ಏನು..ಇವರೆಲ್ಲರ ಮಧ್ಯೆ ಇಂದಿರಾ ಕುಮಾರಿ ಉತ್ತಮ ಅಂಕಗಳು ಮತ್ತು ಚನ್ನಾಗಿ ಓದುವ ಕಾರಣದಿಂದ ಬಿಹಾರ ಸ್ಕೂಲ್ ಎಕ್ಸಾಮಿನೇಷನ್ ಬೋರ್ಡ್ ಅಡಿಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಅರ್ಹಳಾಗಿದ್ದಾಳೆ. ಇದರಿಂದ ಗ್ರಾಮಸ್ಥರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.
ಇಂದಿರಾ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾಳೆ ಎಂಬ ವಿಚಾರ ನಮಗೆ ಸಂತೋಷ ಮೂಡಿಸಿದೆ. ಎಷ್ಟೋ ಕಷ್ಟ ಅನುಭವಿಸಿದ್ರೂ ಕೂಡ, ಛಲಬಿಡದೆ ಓದನ್ನು ಮುಂದುವರೆಸಿದ್ದಾಳೆ. ಇದು ನಮ್ಮ ಊರಿಗೆ ಹೆಮ್ಮೆಯ ಸಂಗತಿ. ಇವಳ ಈ ಧೈರ್ಯ ಇನ್ನಷ್ಟು ಹೆಣ್ಣು ಮಕ್ಕಳ ಓದಿಗೆ ಸ್ಪೂರ್ತಿ ನೀಡಲಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ರು.
ʻಬಚ್ಪನ್ ಬಚಾವೋ ಆಂದೋಲನʼ ಎಂಬ ಸಂಸ್ಥೆಯೊಂದು ಹಿಂದುಳಿದ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಇಂದಿರಾ ಕುಮಾರಿ ಸಾಧನೆ ಆ ಸಂಸ್ಥೆಗೆ ಹೆಸರು ಉಳಿಸಿದೆ ಎಂದಿದ್ದಾರೆ.