ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪಿಎಂ ಮಹತ್ವದ ಸಭೆ
ದೆಹಲಿ: ದೇಶದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳು ಏರುತ್ತಿರುವ ಬೆನ್ನಲ್ಲೇ, ಪಿಎಂ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ಕರೆದಿದ್ದಾರೆ. ಇಂದು ಸಂಜೆ 4ಕ್ಕೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಕೊರೊನಾ ರೂಪಾಂತರಿ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಡಿವಾಣ ಹಾಕುವ ನಿಟ್ಟಿನಲ್ಲಿ ಆಯಾ ರಾಜ್ಯದ ಸೋಂಕಿನ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಲಿದ್ದಾರೆ. ಎಲ್ಲಾ ರಾಜ್ಯದ ಸಿಎಂಗಳು ಕಡ್ಡಾಯವಾಗಿ ಸಭೆಯಲ್ಲಿ ಭಾಗಿಯಾಗಿ ಕೊರೊನಾ ಬಗ್ಗೆ ವರದಿ ನೀಡಲಿದ್ದಾರೆ. ಸಭೆಯಲ್ಲಿ ಆರೋಗ್ಯ ಅಧಿಕಾರಿಗಳು ಭಾಗಿಯಾಗುವ ನಿರೀಕ್ಷೆಯಿದೆ.
ಈಗಾಗಲೇ ನೈಟ್ ಕರ್ಫ್ಯೂ, ವಾರಾಂತ್ಯ ನಿಷೇಧ, ಶಾಲೆಗಳಿಗೆ ರಜೆ ನೀಡಿದ್ರೂ ಸಹ ಇನ್ನಷ್ಟು ಬಿಗಿ ಕ್ರಮಗಳಿಗೆ ಸೂಚನೆ ನೀಡಬಹುದು ಎಂಬ ಮಾಹಿತಿಯಿದೆ. ಲಸಿಕಾ ಅಭಿಯಾನ ಹೆಚ್ಚಿಸುವುದು, ಸೂಕ್ತ ಚಿಕಿತ್ಸೆಗಳಿಗೆ ಅನುವು ಮಾಡಿಕೊಡುವುದು. ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯುವುದು, ಮೆಡಿಕಲ್ ಕಿಟ್ ವಿತರಣೆ ಮುಂತಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ಲಾಕ್‌ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ, ಸಂಪೂರ್ಣ ಲಾಕ್‌ಡೌನ್ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ. ಜನರ ಆರೋಗ್ಯ ದೃಷ್ಟಿಯಿಂದ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.