ಅಮ್ಮ ಮಿನಿ ಕ್ಲಿನಿಕ್ಸ್ ಬಂದ್; ತಮಿಳುನಾಡಿನಲ್ಲಿ ಜೋರಾಯ್ತು ದ್ವೇಷ ಪಾಲಿಟಿಕ್ಸ್
ಚೆನ್ನೈ: ಎಐಎಡಿಎಂಕೆ ಸರ್ಕಾರದಲ್ಲಿ ಸ್ಥಾಪಿಸಿದ್ದ ಅಮ್ಮ ಮಿನಿ ಕ್ಲಿನಿಕ್‌ಗಳನ್ನು ತಮಿಳುನಾಡಿನ ಈಗಿನ ಡಿಎಂಕೆ ಸರ್ಕಾರ ಮುಚ್ಚುವ ನಿರ್ಧಾರ ಕೈಗೊಂಡಿದ್ದಾರೆ. ತಮಿಳುನಾಡಿನ ಆರೋಗ್ಯ ಸಚಿವರು ಈ ಮಾಹಿತಿ ನೀಡಿದ್ದಾರೆ.
ಅಮ್ಮ ಮಿನಿ ಕ್ಲಿನಿಕ್‌ಗಳಿಗಾಗಿ 1820 ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಇವರ ಗುತ್ತಿಗೆ ಅವಧಿಯನ್ನು ಮಾರ್ಚ್‌ವರೆಗೆ ವಿಸ್ತರಿಸಲಾಗಿದ್ದು, ಇವರನ್ನು ಕೊವಿಡ್ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ಎಐಎಡಿಎಂಕೆ ಸರ್ಕಾರದ ವೇಳೆ ಕಾಟಾಚಾರಕ್ಕೆ ಅಮ್ಮ ಮಿನಿ ಕ್ಲಿನಿಕ್‌ಗಳನ್ನು ತೆರೆಯಲಾಗಿತ್ತು. ಇವು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರಲಿಲ್ಲ. ಈ ಕ್ಲಿನಿಕ್‌ಗಳಲ್ಲಿ ನರ್ಸ್‌ಗಳನ್ನೂ ನೇಮಕ ಮಾಡಿರಲಿಲ್ಲ. ಜೊತೆಗೆ ಈ ಕ್ಲಿನಿಕ್‌ಗಳಿಂದ ಯಾರಿಗೆಲ್ಲಾ ಉಪಯೋಗವಾಗಿದೆ, ಎಷ್ಟು ಜನಕ್ಕೆ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿಯೂ ಸಿಕ್ಕಿಲ್ಲ. ಹೀಗಾಗಿ ವಿನಾಕಾರಣ ಜನರ ದುಡ್ಡು ವ್ಯಯ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ ಈ ಅಮ್ಮ ಮಿನಿ ಕ್ಲಿನಿಕ್‌ಗಳನ್ನು ಮುಚ್ಚುತ್ತಿದ್ದೇವೆ ಎಂದು ತಮಿಳುನಾಡು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಇನ್ನು ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಸಲುವಾಗ ಡಿಎಂಕೆ ಸರ್ಕಾರ ಬಡವರ ಮನೆ ಬಾಗಿಲಿಗೆ ವೈದ್ಯರು ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಜನರಿಗೆ ಸಾಕಷ್ಟು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮನೆ ಬಳಿಯೇ ಜನರು ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ಇದುವರೆಗೆ 43 ಲಕ್ಷ ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.