ಮತ್ತೊಮ್ಮೆ ನಾಯಕಿಯಾಗಿದ್ದಾರೆ ಅನುಶ್ರೀ
ಬೆಂಗಳೂರು : ಕಿರುತೆರೆಯಲ್ಲಿ ಸಾಕಷ್ಟು ಬಿಜಿ ಆಂಕರ್ ಆಗಿ ಗುರುತಿಸಿಕೊಂಡಿರುವ ಅನುಶ್ರೀ ಅವರು ಮತ್ತೊಮ್ಮೆ ಚಂದನವನಕ್ಕೆ ಕಾಲಿಟ್ಟಿದ್ದಾರೆ. ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲು ಅನುಶ್ರೀ ಸಜ್ಜಾಗಿದ್ದಾರೆ.
ಬೆಂಕಿಪಟ್ಣ, ರಿಂಗ್ ಮಾಸ್ಟರ್, ಮಾದ ಮತ್ತು ಮಾನಸಿ, ಉಪ್ಪು ಹುಳಿ ಖಾರ ಸಿನಿಮಾದ ಬಳಿಕ ಇದು ಅನುಶ್ರೀ ಅವರ ಐದನೇ ಸಿನಿಮಾ ಆಗಲಿದೆ. ಹಾರರ್ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಅನುಶ್ರೀ.
ತಮ್ಮ ಹೊಸ ಸಿನಿಮಾದ ಮಾಹಿತಿಯನ್ನು ಅನುಶ್ರೀ ಅವರು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಹೊಸ ವರ್ಷದ ಸಿಹಿ ಸುದ್ದಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಆಶೀರ್ವಾದವಿರಲಿ. ಚಿತ್ರವೊಂದಕ್ಕೆ ನನ್ನ ಸೇರ್ಪಡೆ ಆಗಿದೆ. ವಿಭಿನ್ನ ಕಥೆಯ ಹಾರರ್ ಸಿನಿಮಾ ಇದಾಗಿರಲಿದೆ. ಶೀಘ್ರದಲ್ಲೇ ಸಿನಿಮಾ ಶೀರ್ಷಿಕೆಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮಮ್ಮಿ ಮತ್ತು ದೇವಕಿ ಸಿನಿಮಾ ನಿರ್ದೇಶಕ ಲೋಹಿತ್ ಅವರ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದೆ. ಲೋಹಿತ್ ಅವರೊಟ್ಟಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರಭಾಕರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ.