NationalPolitics

ತೆಲಂಗಾಣ ಚುನಾವಣೆ; ಸಿಂಗಿರೇಣಿ – ಇದು 12 ವಿಧಾನಸಭಾ ಕ್ಷೇತ್ರಗಳ ಮತಗಳ ಗಣಿ!

ಹೈದರಾಬಾದ್‌; ತೆಲಂಗಾಣದಲ್ಲಿ ಚುನಾವಣಾ ರಾಜಕೀಯ ರಂಗೇರುತ್ತಿದೆ. ಅಖಂಡ ಆಂಧ್ರ ಪ್ರದೇಶ ವಿಭಜನೆಯಾದ ಮೇಲೆ ನಡೆಯುತ್ತಿರುವ ಮೂರನೇ ವಿಧಾನಸಭಾ ಚುನಾವಣೆ ಇದು. ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಆಗಿನ ಟಿಆರ್‌ಎಸ್‌ಪಾರ್ಟಿಗೆ ಪೈಪೋಟಿ ನೀಡುವ ಪಕ್ಷಗಳೇ ಇರಲಿಲ್ಲ. ಈಗ ಅದೇ ಟಿಆರ್‌ಎಸ್‌  ಪಾರ್ಟಿ ಬಿಆರ್‌ಎಸ್‌ ಹೆಸರಿನಲ್ಲಿ ಮೂರನೇ ಬಾರಿ ಆಯ್ಕೆ ಬಯಸಿ ಜನರ ಮುಂದೆ ಬಂದಿದೆ. ಆದ್ರೆ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಹಾಗೂ ಬಿಜೆಪಿ ಪಕ್ಷಗಳು ಸಾಕಷ್ಟು ಪ್ರಬಲಗೊಂಡಿವೆ. ಕಾಂಗ್ರೆಸ್‌ಪಕ್ಷವಂತೂ ಬಿಆರ್‌ಎಸ್‌ಪಾರ್ಟಿಗೆ ತೀವ್ರ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಸಮೀಕ್ಷೆಗಳ ಪ್ರಕಾರ, ಬಿಆರ್‌ಎಸ್‌ಹಾಗೂ ಕಾಂಗ್ರೆಸ್‌ನಡುವೆ ನೆಕ್‌ಟು ನೆಕ್‌ ಫೈಟ್‌ ಇರುತ್ತೆ ಎಂದು ಹೇಳಲಾಗುತ್ತಿದೆ.

119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಯಲ್ಲಿ ಒಂದೊಂದು ಪ್ರದೇಶವೂ ಒಂದೊಂದು ವಿಶೇಷತೆ ಹೊಂದಿದೆ. ಆಯಾ ಪ್ರದೇಶದ ಸಮಸ್ಯೆಗಳು ಈ ಚುನಾವಣೆ ಮೇಲೆ ಪ್ರಭಾವ ಬೀರುತ್ತವೆ. ಅದರಲ್ಲಿ  ಸಿಂಗಿರೇಣಿ ಕಲ್ಲಿದ್ದಲು ಗಣಿ ಪ್ರದೇಶ ಕೂಡಾ ಒಂದು. ಸಿಂಗಿರೇಣಿ ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಪ್ರದೇಶದ ಕಾರ್ಮಿಕರು ಹಾಗೂ ಅವರ ಕುಟುಂಬಗಳೇ ಹೆಚ್ಚಿರುವ ಪ್ರದೇಶ ವ್ಯಾಪ್ತಿಯಲ್ಲಿ 12 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇಲ್ಲಿ ಸಿಂಗಿರೇಣಿ ಗಣಿಕಾರ್ಮಿಕ ಕುಟುಂಬಗಳ ಮತದಾರರೇ ನಿರ್ಣಾಯಕ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳೂ ಈ ಭಾಗದ ಮೇಲೆ ಕಣ್ಣಿಟ್ಟಿವೆ. ಮೊನ್ನೆ ರಾಹುಲ್‌ ಗಾಂಧಿ ಆರಂಭಿಸುತ್ತಿದ್ದಂತೆ ಮೊದಲು ಅವರು ಸಂಚರಿಸಿದ್ದು ಕೂಡಾ ಇದೇ ಭಾಗದಲ್ಲಿ. ಸಿಂಗಿರೇಣಿ ಗಣಿಗಾರಿಕೆ ಪ್ರದೇಶಗಳಾದ  ಭೂಪಾಲಪಲ್ಲಿ, ರಾಮಗುಂಡಂ, ಮಂಥನಿ, ಪೆದ್ದಪಲ್ಲಿಗೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು.

ರಾಮಗುಂಡಂನಲ್ಲಿ ಸಿಂಗರೇಣಿ ಕಾರ್ಮಿಕರನ್ನು ಭೇಟಿ ಮಾಡಿದ ರಾಹುಲ್‌ ಗಾಂಧಿ ಅವರ ಸಮಸ್ಯೆಗಳನ್ನು ಅರಿತರು. ಇದರಿಂದ ಎಲ್ಲರ ಗಮನ ಸಿಂಗರೇಣಿ ಕಾರ್ಮಿಕರು ಹಾಗೂ ಅವರ ಸಮಸ್ಯೆಗಳ ಮೇಲೆ ಬಿದ್ದಿದೆ.

12 ಕ್ಷೇತ್ರಗಳಲ್ಲಿ ಸಿಂಗಿರೇಣಿ ಕಾರ್ಮಿಕ ಕುಟುಂಬಗಳ ಮತಗಳೇ ನಿರ್ಣಾಯಕ

ಸಿಂಗರೇಣಿ ಎಂದು ಜನಪ್ರಿಯವಾಗಿರುವ ‘ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್’ ಇಂದು ಸರ್ಕಾರಿ ಗಣಿ ಕಂಪನಿ. ಈ ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಲ್ಲಿ ಕೇಂದ್ರ ಸರ್ಕಾರ ಹಾಗೂ ತೆಲಂಗಾಣ ಸರ್ಕಾರಗಳೆರಡೂ ಪಾಲು ಹೊಂದಿವೆ.

ಸಿಂಗಿರೇಣಿ ಗಣಿಗಾರಿಕೆಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇಕಡಾ 49 ರಷ್ಟಿದೆ. ತೆಲಂಗಾಣ ಸರ್ಕಾರದ ಪಾಲು ಶೇಕಡಾ 51 ರಷ್ಟಿದೆ. ಈ ಕಲ್ಲಿದ್ದಲು ಗಣಿಗಳು ತೆಲಂಗಾಣದ ಗೋದಾವರಿ ಹಾಗೂ ಸುತ್ತಮುತ್ತಲ ಕಣಿವೆಗಳಲ್ಲಿ 350 ಕಿ.ಮೀ. ವ್ಯಾಪ್ತಿಯಲ್ಲಿ ಬರುತ್ತದೆ.

ತೆಲಂಗಾಣದ ಆರು ಜಿಲ್ಲೆಗಳಲ್ಲಿ ಈ ಸಿಂಗಿರೇಣಿ ಕಲ್ಲಿದ್ದಲು ಗಣಿ ಪ್ರದೇಶವಿದೆ. ಈ ವ್ಯಾಪ್ತಿಯಲ್ಲಿ ಕೊಮರಂಭೀಮ್, ಮಂಚಿರ್ಯಾಲ, ಪೆದ್ದಪಲ್ಲಿ, ಜಯಶಂಕರ್ ಭೂಪಾಲಪಲ್ಲಿ, ಭದ್ರಾದ್ರಿ ಕೊತಗುಡೆಂ, ಮಂಚಿರ್ಯಾಲ, ಬೆಳ್ಳಂಪಲ್ಲಿ, ಚೆನ್ನೂರು, ಆಸಿಫಾಬಾದ್, ರಾಮಗುಂಡಂ, ಪೆದ್ದಪಲ್ಲಿ, ಮಂಥನಿ, ಭೂಪಾಲಪಲ್ಲಿ, ಪಿಣಪಾಕ, ಕೊತ್ತಗುಡೆಂ, ಸತ್ತುಪಲ್ಲಿ, ಇಲ್ಲಾಂಡು ವಿಧಾನಸಭಾ ಕ್ಷೇತ್ರಗಳ ಬರುತ್ತವೆ. ಇನ್ನು ಅದಿಲಾಬಾದ್‌, ವರಂಗಲ್‌, ಪೆದ್ದಪಲ್ಲಿ, ಖಮ್ಮಂ ಹಾಗೂ ಮಹಬೂಬಾಬಾದ್‌ ಲೋಕಸಭಾ ಕ್ಷೇತ್ರಗಳ ಚುನಾವಣೆ ಫಲಿತಾಂಶ ಕೂಡಾ ಈ ಸಿಂಗಿರೇಣಿ ಗಣಿ ಕಾರ್ಮಿಕ ಕುಟುಂಬಗಳ ಮತದಾರರ ಮೇಲೇ ನಿಂತಿದೆ.

ಪ್ರಸ್ತುತ ಸಿಂಗರೇಣಿಯಲ್ಲಿ ಸುಮಾರು 42 ಸಾವಿರ ಕಾರ್ಮಿಕರಿದ್ದಾರೆ. ಇವರೊಂದಿಗೆ ಸುಮಾರು 20 ಸಾವಿರ ಗುತ್ತಿಗೆ ಕಾರ್ಮಿಕರೂ ಕೆಲಸ ಮಾಡುತ್ತಿದ್ದಾರೆ. 60 ಸಾವಿರಕ್ಕೂ ಹೆಚ್ಚು ಪಿಂಚಣಿದಾರರಿದ್ದಾರೆ. ಈ ಹಿನ್ನೆಲೆಯಲ್ಲಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಂಗರೇಣಿ ಕಾರ್ಮಿಕ ಕುಟುಂಬಗಳ ಮತಗಳು ನಿರ್ಣಾಯಕವಾಗಿವೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಈ ಸಿಂಗಿರೇಣಿ ಗಣಿಗಾರಿಕೆ ಪ್ರದೇಶ ವ್ಯಾಪ್ತಿಯಲ್ಲಿ ಬರುವ 12 ವಿಧಾನಸಭಾ ಕ್ಷೇತ್ರಗಳ ಪೈಕಿ, ಕಾಂಗ್ರೆಸ್‌ ಅರ್ಧದಷ್ಟು ಹಾಗೂ ಆಗಿನ ಟಿಆರ್‌ಎಸ್‌ ಅರ್ಧದಷ್ಟು ಕ್ಷೇತ್ರಗಳನ್ನು ಗೆದ್ದಿದ್ದವು. ಮಂಥನಿ, ಭೂಪಾಲಪಲ್ಲಿ, ಕೊತ್ತಗುಡೆಂ, ಇಲ್ಲಂಡು, ಪಿನಪಾಕ, ಸತ್ತುಪಲ್ಲಿ (ಟಿಡಿಪಿ, ಕಾಂಗ್ರೆಸ್ ಮೈತ್ರಿ) ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ಆಸಿಫಾಬಾದ್, ಮಂಚೇರಿಯಾಲ, ಪೆದ್ದಪಲ್ಲಿ, ಬೆಳ್ಳಂಪಲ್ಲಿ ಮತ್ತು ಚೆನ್ನೂರಿನಲ್ಲಿ ಬಿಆರ್‌ಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ರಾಮಗುಂಡಂನಲ್ಲಿ ಫಾರ್ವರ್ಡ್ ಬ್ಲಾಕ್ ಚಿಹ್ನೆಯಲ್ಲಿ ಸ್ಪರ್ಧಿಸಿದ್ದ ಟಿಆರ್‌ಎಸ್ ಬಂಡಾಯ ಅಭ್ಯರ್ಥಿ ಗೆದ್ದಿದ್ದರು.

ಆದ್ರೆ ಚುನಾವಣಾ ಫಲಿತಾಂಶದ ನಂತರ ರಾಮಗುಂಡಂ ಶಾಸಕ ಕೋರುಕಂಟಿ ಚಂದರ್‌, ಭೂಪಾಲಪಲ್ಲಿ ಕ್ಷೇತ್ರದ ಶಾಸಕ ವೆಂಕಟರಮಣ ರೆಡ್ಡಿ, ಕೊತ್ತಗುಡ್ಡೆ ಕ್ಷೇತ್ರದ ಶಾಸಕ ವನಮಾ ವೆಂಕಟೇಶ್ವರ ರಾವ್‌, ಇಲ್ಲಂದು ಕ್ಷೇತ್ರದ ಬಾನೋತ್‌ ಹರಿಪ್ರಿಯಾ, ಸತ್ತುಪಲ್ಲಿಯ ಸಂದ್ರಾ ವೆಂಕಟವೀರಯ್ಯ ಕಾಂಗ್ರೆಸ್‌ ತೊರೆದು ಆಗಿನ ಟಿಆರ್‌ಎಸ್‌ ಸೇರ್ಪಡೆಯಾಗಿದ್ದರು.

ಇನ್ನು 2019 ರ ಲೋಕಸಭಾ ಚುನಾವಣೆಯಲ್ಲಿ, ಸಿಂಗರೇಣಿ ಪ್ರದೇಶದ ಲೋಕಸಭಾ ಕ್ಷೇತ್ರಗಳಾದ ಆದಿಲಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.  ಉಳಿದ ನಾಲ್ಕು ಕ್ಷೇತ್ರಗಳಾದ ಪೆದ್ದಪಲ್ಲಿ, ವಾರಂಗಲ್, ಖಮ್ಮಮ್ ಮತ್ತು ಮಹಬೂಬಾಬಾದ್‌ ಗಳಲ್ಲಿ ಟಿಆರ್‌ಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಇಲ್ಲಿ ಕಾಂಗ್ರೆಸ್‌ ಒಂದು ಸ್ಥಾನವನ್ನೂ ಗೆಲ್ಲಲಾಗಿಲ್ಲ.

ಹೀಗೆ ಸಿಂಗಿರೇಣಿ ಪ್ರಾಂತ್ಯದ ಮತದಾರರು ಯಾವಾಗಲೂ ಒಂದೇ ಪಕ್ಷಕ್ಕೆ ಗಂಟುಬಿದ್ದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಒಂದು ರೀತಿಯಲ್ಲಿ ತೀರ್ಪು ಕೊಟ್ಟರೆ, ಲೋಕಸಭಾ ಚುನಾವಣೆಯಲ್ಲಿನ ಫಲಿತಾಂಶವೇ ಬೇರೆಯಾಗಿರುತ್ತದೆ. ಸದ್ಯ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಸಿಂಗಿರೇಣಿ ಪ್ರದೇಶ ವ್ಯಾಪ್ತಿಯಲ್ಲಿ 12 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಪ್ರಸ್ತುತ ಸಿಂಗರೇಣಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಪಿಂಚಣಿದಾರರ ಕುಟುಂಬಗಳ ಮತಗಳು ಇಲ್ಲಿನ ಕ್ಷೇತ್ರಗಳಲ್ಲಿ ಗೆಲುವಿನ ಮೇಲೆ ಪ್ರಭಾವ ಬೀರಲಿವೆ.

ಸಿಂಗಿರೇಣಿ ಕಾರ್ಮಿಕರ ಸಮಸ್ಯೆ ಮುಂದಿಟ್ಟುಕೊಂಡು ರಾಜಕೀಯ

ತೆಲಂಗಾಣಿದಲ್ಲಿ ಆಡಳಿತ ನಡೆಸುತ್ತಿರುವ ಆಗಿನ ಟಿಆರ್‌ಎಸ್‌ ಈಗಿನ ಬಿಆರ್ ಎಸ್ ಅಧಿಕಾರಕ್ಕೆ ಬಂದ ಕೂಡಲೇ ಸಿಂಗರೇಣಿ ಕಾರ್ಮಿಕರಿಗೆ ಹಲವು ಸವಲತ್ತುಗಳನ್ನು ಒದಗಿಸಿದ್ದೇವೆ ಎಂದು ಹೇಳುತ್ತಿದೆ. ಆದ್ರೆ ಬಿಜೆಪಿ ಮಾತ್ರ ಸಿಂಗರೇಣಿ ಸಂಸ್ಥೆಯನ್ನು ಉಳಿಸಿದ್ದು, ಲಾಭದ ಹಾದಿಯಲ್ಲಿ ಮುನ್ನಡೆಸಿದ್ದು ಕೇಂದ್ರ ಸರ್ಕಾರ ಎಂದು ಹೇಳುತ್ತಿದೆ.

ಮೇಲಾಗಿ ಬಿಜೆಪಿಯ ಮಾಜಿ ಸಂಸದ ಗದ್ದಂ ವಿವೇಕ್ ವೆಂಕಟಸ್ವಾಮಿ ಅವರು ಸಿಂಗರೇಣಿ ಕಾರ್ಮಿಕರ ಬಹುಕಾಲದ ಬೇಡಿಕೆಯಾದ ಆದಾಯ ತೆರಿಗೆ ವಿನಾಯಿತಿಯನ್ನು ಸಾಧ್ಯವಾಗಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನೊಂದೆಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿಂಗರೇಣಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿವೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡುತ್ತಿದ್ದಾರೆ. ಆದಾಯ ತೆರಿಗೆ ರೂಪದಲ್ಲಿ ಕೇಂದ್ರವು ಕಾರ್ಮಿಕರಿಂದ ಭಾರಿ ಮೊತ್ತವನ್ನು ವಸೂಲಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ.

 ಸಿಂಗಿರೇಣಿ ಕಾರ್ಮಿಕರ ಸಮಸ್ಯೆಗಳೇನು?

ಸಿಂಗಿರೇಣಿ ಕಾರ್ಮಿಕರಿಗೆ ಕೆಲಸದ ನಿಗದಿಯ ಸಮಯವಿಲ್ಲ. ದಿನಕ್ಕೆ ಹತ್ತು ಹನ್ನೆರಡು ಗಂಟೆ ಕೆಲಸ ಮಾಡಿಸಲಾಗುತ್ತದೆ. ಜೊತೆ ಇತ್ತೀಚೆಗೆ ಯಂತ್ರಗಳ ಮೂಲಕ ಗಣಿಗಾರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಇನ್ನು ಫರ್ಮನೆಂಟ್‌ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳದೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಂಡು ಕೆಲಸ ಮಾಡಿಸಲಾಗುತ್ತಿದೆ.

ಸಿಂಗರೇಣಿಯ ನಿವೃತ್ತ ಕಾರ್ಮಿಕರು, ನೌಕರರು ಕೂಡ ಪಿಂಚಣಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಹಳ ದಿನಗಳಿಂದ ವೇತನ ಪರಿಷ್ಕರಣೆ ಜಾರಿಯಾಗದ ಕಾರಣ ಹಳೆ ಪಿಂಚಣಿಯೇ ಬರುತ್ತಿದ್ದು, ಕಲ್ಲಿದ್ದಲು ಗಣಿ ಭವಿಷ್ಯ ನಿಧಿಯಲ್ಲಿ (ಸಿಎಂಪಿಎಫ್) ಸಮಸ್ಯೆಗಳಿವೆ ಎಂದು ನಿವೃತ್ತ ಕಾರ್ಮಿಕರು ಆರೋಪ ಮಾಡುತ್ತಿದ್ದಾರೆ.

ಇನ್ನು ಈ ಗಣಿಗಾರಿಕೆ ಪ್ರದೇಶದಲ್ಲಿ ಖಾಸಗಿಯವರು ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದಾಗಿ ಸಿಂಗಿರೇಣಿ ಕಾರ್ಮಿಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂಬ ಆತಂಕ ಕೂಡಾ ಇದೆ. ಹೀಗಾಗಿ, ಎಲ್ಲಾ ಪಕ್ಷಗಳು ಈ ಬಾರಿ ನಮ್ಮನ್ನು ಗೆಲ್ಲಿಸಿದರೆ ನಿಮ್ಮ ಎಲ್ಲಾ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳುತ್ತಿದ್ದಾರೆ. ಆದ್ರೆ ಸಿಂಗಿರೇಣಿ ಕಾರ್ಮಿಕ ಕುಟುಂಬಗಳು ಯಾವ ಪಕ್ಷಕ್ಕೆ ಒಲಿಯುತ್ತಾರೋ ನೋಡಬೇಕು.

Share Post