National

ಪಂಜಾಬ್‌ ಭಾವಿ ಸಿಎಂ ಭಗವಂತ್‌ ಮಾನ್‌ ಯಾರು..?; ಕಾಮೆಡಿಯನ್‌ ಮುಖ್ಯಮಂತ್ರಿಯಾಗಿದ್ದು ಹೇಗೆ..?

ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಿರಿಯ ನಾಯಕ ಭಗವಂತ್‌ ಮಾನ್‌ ಹೆಸರನ್ನು ಆಮ್‌ ಆದ್ಮಿ ಪಾರ್ಟಿ ಮೊದಲೇ ಪ್ರಕಟಿಸಿತ್ತು. ಜನಾಭಿಪ್ರಾಯ ಪಡೆದು ಎಎಪಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸಿತ್ತು. ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಪಾರ್ಟಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ , ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿ ದಿಟ್ಟ ನಿರ್ಧಾರ ತೆಗೆದುಕೊಂಡು, ಪಂಜಾಬ್‌ನಲ್ಲಿ ಎಎಪಿ ಅದೃಷ್ಟ ಪರೀಕ್ಷೆಗೆ ಇಳಿದಿತ್ತು. 117 ಕ್ಷೇತ್ರಗಳ ಪಂಜಾಬ್‌ ಅಸೆಂಬ್ಲಿಯಲ್ಲಿ ಎಎಪಿ ಬರೋಬ್ಬರಿ 91 ಸೀಟುಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಭಗವಂತ್‌ ಮಾನ್‌ ಪಂಜಾಬ್‌ ಸಿಎಂ ಗದ್ದುಗೆ ಏರುತ್ತಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಒಂದನ್ನು ಮಾಡಿದ್ದರು. ಅದು ಹೀಗಿತ್ತು.

ʻಪಂಜಾಬ್‌ ಆಮ್‌ ಆದ್ಮಿ ಪಾರ್ಟಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ಭಗವಂತ್‌ ಮಾನ್‌ ಅವರೊಗೆ ಅಭಿನಂದನೆಗಳು. ಇಡೀ ಪಂಜಾಬ್‌ ರಾಜ್ಯ ಆಮ್‌ ಆದ್ಮಿ ಪಾರ್ಟಿ ಕಡೆಗೇ ಆಸೆಯಿಂದ ನೋಡುತ್ತಿದೆ. ಇದು ತುಂಬಾ ದೊಡ್ಡ ಜವಾಬ್ದಾರಿ. ಪಂಜಾಬಿಗಳ ಮುಖಗಳಲ್ಲಿ ಭಗವಂತ್‌ ಮಾನ್‌ ಖುಷಿ, ನಗು ತರುತ್ತಾರೆಂದು ನನಗೆ ನಂಬಿಕೆ ಇದೆ.ʼ ಹೀಗಂತ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದರು.

ಒಬ್ಬ ಕಮೆಡಿಯನ್‌ ಆಗಿ, ರಾಜಕೀಯ ನಾಯಕನಾಗಿ ಭಗವಂತ್‌ ಮಾನ್‌ಗೆ ಜನರಲ್ಲಿ ಪರಿಚಯವಿದೆ. ಪಂಜಾಬ್‌ನಲ್ಲಿನ ಸಂಗ್ರೂರ್‌ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಅವರು ಎರಡನೇ ಸಂಸದರಾಗಿ ಆಯ್ಕೆಯಾಗಿದ್ದರು. ಜೊತೆಗೆ ಪಂಜಾಬ್‌ ಎಎಪಿ ಪಾರ್ಟಿ ಅಧ್ಯರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

2014ರಲ್ಲಿ ಅವರು ಎಎಪಿ ಪಾರ್ಟಿ ಸೇರಿದಾಗಿನಿಂದ ಅವರು ಎಎಪಿಗೆ ಸ್ಟಾರ್‌ ಕ್ಯಾಂಪೇನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಭಗವಂತ್‌ ಮಾನ್‌ ಅವರೇ ಎಎಪಿಗೆ ಅತಿದೊಡ್ಡ ಬಲ ಹಾಗೂ ಬಲಹೀನತೆ ಕೂಡಾ.

ಅಷ್ಟಕ್ಕೂ ಈ ಭಗವಂತ್‌ ಮಾನ್‌ ಯಾರು..?

ಭಗವಂತ ಮಾನ್‌ ಅವರು ಬಹಳ ವಿಶೇಷ ವ್ಯಕ್ತಿ. ಅವರು ಎಷ್ಟು ಫೋನ್‌ ನಂಬರ್‌ಗಳನ್ನಾದರೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಹಾಗೆ ಫೋನ್‌ ನಂಬರ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವರ ಅಭ್ಯಾಸ. ಜೊತೆಗೆ ಮೊದಲಿನಿಂದಲೂ ಅವರು ದಿನಪತ್ರಿಕೆಗಳನ್ನು ಓದುವುದು, ರೇಡಿಯೋದಲ್ಲಿ ನ್ಯೂಸ್‌ ಕೇಳುವುದನ್ನು ಮಾಡುತ್ತಾ ಬಂದಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿನ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಅವರು ಬೆಳಗ್ಗೆ ಏಳುತ್ತಲೇ ಜಿಲ್ಲಾ ಪತ್ರಿಕೆಗಳನ್ನು ತರಿಸಿಕೊಂಡು ಓದುತ್ತಾರೆ. ಇನ್ನು ರೇಡಿಯೋದಲ್ಲಿ ಕ್ರಿಕೆಟ್‌ ಕಾಮೆಂಟರಿ ಕೇಳುವುದು ಅವರಿಗೆ ಚಿಕ್ಕವಯಸ್ಸಿನಿಂದ ಬಂದಿರುವ ಹವ್ಯಾಸ. ಈ ಹವ್ಯಾಸವನ್ನು ಅವರು ಇಂದಿಗೂ ಬದಲಿಸಿಲ್ಲ.

ಪಂಜಾಬ್‌ ರಾಜ್ಯದಲ್ಲಿನ ಸಂಗ್ರೂರ್‌ ಜಿಲ್ಲೆ ಷಿಮಾ ಮಂಡಿ ಸಮೀಪದ ಸತೋಜ್‌ ಗ್ರಾಮದಲ್ಲಿ 1973 ಅಕ್ಟೋಬರ್‌ 17ರಂದು ಭಗವಂತ್‌ ಮಾನ್‌ ಜನಿಸಿದರು. ಅವರ ತಂದೆ ಮೊಹಿಂದರ್‌ ಸಿಂಗ್‌ ಸರ್ಕಾರಿ ಶಿಕ್ಷಕ. ತಾಯಿ ಹರ್‌ಪಾಲ್‌ ಕೌರ್‌ ಗೃಹಿಣಿ.

ಪದವಿ ಓದುತ್ತಿರುವಾಗಲೇ ಭಗವಂತ ಮಾನ್‌ ಕಾಮೆಡಿ ಮಾಡಲು ಶುರು ಮಾಡಿದರು. ಸಂಗ್ರೂರ್‌ನಲ್ಲಿನ ಸುನಾಮ್‌ ಷಹೀದ್‌ ಉದ್ಧಮ್‌ ಸಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲಿ ಕವಿತೆಗಳು, ಕಾಮಿಡಿ ವಿಭಾಗದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದರು. ಹೀಗೆ ಮುಂದುವರೆದು ಪ್ರೊಫೆಷನಲ್‌ ಕಮೆಡಿಯನ್‌ ಆಗಿ ಬದಲಾಗಿದ್ದರು.

ಪಿಯುಸಿ ಮುಗಿದ ನಂತರ ಭಗವಂತ್‌ ಮಾನ್‌ ಅವರು ಬಿ.ಕಾಂ.ಗೆ ಸೇರುತ್ತಾರೆ. ಆದರೆ ಕಾಮಿಡಿ ಕ್ಷೇತ್ರದಲ್ಲಿ ಬ್ಯುಸಿಯಾದ ಕಾರಣ ಓದನ್ನು ಮಧ್ಯದಲ್ಲೇ ಬಿಟ್ಟುಬಿಡುತ್ತಾರೆ. 1992 ರಿಂದ 2013ರವರೆಗೆ 25 ಕಾಮಿಡಿ ಆಲ್ಬಮ್‌ಗಳನ್ನು ಅವರು ರೆಕಾರ್ಡ್‌ ಮಾಡಿದ್ದಾರೆ. 5 ಆಡಿಯೋ ಟೇಲ್‌ಗಳನ್ನು ಕೂಡಾ ರಿಲೀಸ್‌ ಮಾಡಿದ್ದರು. 1994 ರಿಂದ 2015ರವರೆಗೆ 13 ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು.

ಭಗವಂತ್‌ ಮಾನ್‌ ಅವರು ಇಂದ್ರಜಿತ್‌ ಕೌರ್‌ ಜೊತೆ ವಿವಾಹವಾಗಿದ್ದಾರೆ. ಅವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಇಂದ್ರಜಿತ್‌ ಕೌರ್‌ ಅಮೆರಿಕದಲ್ಲಿ ಇದ್ದಾರೆ. ಭಗವಂತ್‌ ಮಾನ್‌ ತನ್ನ ತಾಯಿ ಜೊತೆ ಸತೋಜ್‌ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಭಗವಂತ್‌ ಮಾನ್‌ ರಾಜಕೀಯ ಪ್ರವೇಶ

ಚಿಕ್ಕ ವಯಸ್ಸಿನಲ್ಲೇ ಭಗವಂತ ಮಾನ್‌ ಭಾಷಣಗಳನ್ನು ಮಾಡುತ್ತಿದ್ದರು. ಸಮಾಜ, ರಾಜಕೀಯದಲ್ಲಿನ ಸಮಸ್ಯೆಗಳ ಬಗ್ಗೆ ಭಗವಂತ್‌ ಮಾನ್‌ ತನ್ನ ಕಲೆಯ ಮೂಲಕ ಪ್ರದರ್ಶಿಸುತ್ತಿದ್ದರು. 2009-10 ರ ಸಮಯದಲ್ಲಿ ದಿನಪತ್ರಿಕೆಗಳಲ್ಲಿ ಕಾಂ ಬರೆಯಲು ಶುರು ಮಾಡುತ್ತಾರೆ. ಫಜಿಲ್ಕಾ ಪ್ರಾಂತ್ಯದಲ್ಲಿ ಬಾಲಕಿಯರು ವಿಚಿತ್ರ ಕಾಯಿಲೆಗೆ ತುತ್ತಾಗುತ್ತಿದ್ದಾರೆಂಬುದು ಅವರ ಗಮನಕ್ಕೆ ಬರುತ್ತದೆ. ಕುಡಿಯುವ ನೀರಿನ ಸಮಸ್ಯೆ ಕಾರಣದಿಂದಾಗಿ ಜನರು ಅನಾರೋಗ್ಯ ಗುರಿಯಾಗುತ್ತಿದ್ದಾರೆಂದು ತಿಳಿದುಕೊಂಡ ಭಗವಂತ್‌ ಮಾನ್‌ ಅವರು, ಅವರ ಸ್ನೇಹಿತರ ಸಹಾಯದಿಂದ ಆ ಪ್ರಾಂತ್ಯದ ಜನರ ಸಮಸ್ಯೆ ನಿವಾರಿಸಲು ಪ್ರಯತ್ನಿಸಿದ್ದರು.

ಸುದ್ದಿಗೋಷ್ಠಿ ಮೂಲಕ ಈ ಸಮಸ್ಯೆಯನ್ನು ಮೀಡಿಯಾ ಗಮನಕ್ಕೆ ತರುತ್ತಾರೆ. 2011ರಲ್ಲಿ ಪ್ರಕಾಶ್‌ ಸಿಂಗ್‌ ಬಾದಲ್‌ ಅಳಿಯ, ಆಗಿನ ಆರ್ಥಿಕ ಮಂತ್ರಿ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಅಕಾಲಿ ದಳ್‌ ಪಾರ್ಟಿಯಿಂದ ಹೊರಬರುತ್ತಾರೆ. ಒಮ್ಮೆ ಮನ್‌ಪ್ರೀತ್‌ ಬಾದಲ್‌ ಅವರನ್ನು ಭೇಟಿ ಮಾಡಿದ ಭಗವಂತ್‌ ಮಾನ್‌ ರಾಜಕೀಯದ ಕಡೆಗೆ ಆಸಕ್ತಿ ತೋರಿಸುತ್ತಾರೆ.

ಭಗವಂತ್‌ ಮಾನ್‌ ರಾಜಕೀಯದ ಹಾದಿ

2011ರ ಮಾರ್ಚ್‌ನಲ್ಲಿ ಮನ್‌ಪ್ರೀತ್‌ ಬಾದಲ್‌ ಅವರ ಪೀಪಲ್ಸ್‌ ಪಾರ್ಟಿ ಆಪ್‌ ಪಂಜಾಬ್‌ ಪಕ್ಷವನ್ನು ಸ್ಥಾಪಿಸಿದಾಗ ಭಗವಂತ್‌ ಮಾನ್‌ ಆ ಪಕ್ಷ ಸೇರುತ್ತಾರೆ. 2012ರಲ್ಲಿ ಅದೇ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋತುಹೋಗುತ್ತಾರೆ. ನಂತರ ತನ್ನ ಪಾರ್ಟಿ ಮುಖ್ಯಸ್ಥ ಮನ್‌ಪ್ರೀತ್‌ ಬಾದಲ್‌ ಕಾಂಗ್ರೆಸ್‌ ಪಾರ್ಟಿ ಸೇರುವುದಕ್ಕೆ ಮುಂದಾಗುತ್ತಾರೆ. ಆದ್ರೆ ಭಗವಂತ್‌ ಮಾನ್‌ ಯಾವುದೇ ಪಾರ್ಟಿ ಸೇರದೆ ಸುಮ್ಮನಾಗುತ್ತಾರೆ. ನಂತರ 2014ರಲ್ಲಿ ಭಗವಂತ್‌ ಮಾನ್‌ ಅವರು ಆಮ್‌ ಆದ್ಮಿ ಪಾರ್ಟಿ ಸೇರುತ್ತಾರೆ. ಅದೇ ವರ್ಷದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ. 2017 ಮೇ 8 ರಂದು ಭಗವಂತ್‌ ಮಾನ್‌ ಪಂಜಾಬ್‌ ರಾಜ್ಯ ಎಎಪಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತದೆ.

Share Post