ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ
ನವದೆಹಲಿ : ರಾಜಕೀಯ ಪಕ್ಷಗಳು ಒಟ್ಟಾಗಿ ಮನವಿ ಸಲ್ಲಿಸಿದ ಕಾರಣ ಚುನಾವಣಾ ಆಯೋಗ ಪಂಜಾಬ್ ರಾಜ್ಯದ ಚುನಾವಣೆಯ ದಿನಾಂಕವನ್ನು ಮುಂದಕ್ಕೆ ಹಾಕಿದೆ. ನಿಗದಿಯ ಪ್ರಕಾರ ಫೆಬ್ರುವರಿ 14ಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಈಗ ಫೆಬ್ರುವರಿ 20ಕ್ಕೆ ಮುಂದೂಡಲಾಗಿದೆ.
ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾಗಿ ಚುನಾವಣಾ ದಿನಾಂಕವನ್ನು ಮುಂದಕ್ಕೆ ಹಾಕುವಂತೆ ಮನವಿ ಸಲ್ಲಿಸಿದ್ದರು. ಈಗ ಚುನಾವಣಾ ಆಯೋಗ ಅದನ್ನು ಅಂಗೀಕರಿಸಿದೆ.
ಪಂಜಾಬ್‌ನಲ್ಲಿ ಗುರು ರವಿದಾಸ್ ಜಯಂತಿಯನ್ನು ಫೆಬ್ರುವರಿ 16ರಂದು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಸಾಕಷ್ಟು ಮತದಾರರು ಈ ಆಚರಣೆಯ ಸಲುವಾಗಿ ವಾರಣಾಸಿಗೆ ತೆರಳುತ್ತಾರೆ. ಶೇ 32ರಷ್ಟು ಮತದಾರರು ಮತದಾನದ ದಿನ ಇಲ್ಲದಿದ್ದರೆ ಮತದಾನ ಅಚ್ಚುಕಟ್ಟಾಗಿ ನಡೆಸಿದಂತೆ ಆಗುವುದಿಲ್ಲ ಎಂದು ಎಲ್ಲಾ ಪಕ್ಷಗಳು ಅಭಿಪ್ರಾಯಿಸಿ ಮುಖ್ಯಮಂತ್ರಿ ಚನ್ನಿ ಅವರಿಂದ ಚುನಾವಣಾ ಆಯೋಗಕ್ಕೆ ಪತ್ರ ಬರೆಸಿದ್ದರು.
ಫೆಬ್ರುವರಿ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಘೋಷಣೆ ಆಗಲಿದೆ.