National

ಹಲಾಲ್‌ ಉತ್ಪನ್ನಗಳ ಮೇಲೆ ನಿಷೇಧ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ

ನವದೆಹಲಿ; ರಾಜ್ಯದಲ್ಲಿ ಇತ್ತೀಚೆಗೆ ಹಲಾಲ್‌ ವಿಚಾರ ದೊಡ್ಡ ಸದ್ದು ಮಾಡಿತ್ತು. ಇದೀಗ ಈ ಸಂಬಂಧ ವಕೀಲರೊಬ್ಬರು ಸುಪ್ರೀಂಕೋರ್ಟ್‌ ಮೊರೆಹೋಗಿದ್ದಾರೆ.  ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಬೇಕು ಎಂದು ಆಗ್ರಹಿಸಿ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

       ವಕೀಲ ವಿಭೋರ್ ಆನಂದ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ.  ದೇಶದ ಶೇಕಡಾ 85ರಷ್ಟು ನಾಗರಿಕರ ಪರವಾಗಿ ಅರ್ಜಿ ಸಲ್ಲಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.  ದೇಶದ ಜನಸಂಖ್ಯೆಯ ಶೇಕಡಾ 15 ರಷ್ಟು ಮಂದಿಯ ಕಾರಣಕ್ಕಾಗಿ ಉಳಿದ ಬಹುಸಂಖ್ಯಾತರು ತಮ್ಮ ಇಚ್ಛೆಗೆ ವಿರುದ್ಧವಾಗಿ ಹಲಾಲ್ ಉತ್ಪನ್ನಗಳನ್ನು ಸೇವಿಸುವಂತೆ ಬಲವಂತಪಡಿಸಲಾಗುತ್ತಿದೆ. ಹಲಾಲ್ ಮಾಂಸವನ್ನು ಬಳಸದ ಜನರು ಅಥವಾ ಜಟ್ಕಾ ಮಾಂಸವನ್ನು ಮಾತ್ರ ಬಳಸಲು ಅನುಮತಿಸುವ ಧರ್ಮದ ಜನರಿಗೆ ಇನ್ನು ಮುಂದೆ ಈ ವಿಷಯದಲ್ಲಿ ಯಾವುದೇ ಆಯ್ಕೆಯಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂಬಂಧ ವಿವಿಧ ಖಾಸಗಿ ಸಂಸ್ಥೆಗಳು ನೀಡುವ ಎಲ್ಲಾ ಪ್ರಮಾಣಪತ್ರಗಳನ್ನು ಅನೂರ್ಜಿತ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಜೊತೆಗೆ ಹಲಾಲ್ ಪ್ರಮಾಣೀಕರಿಸಿದ ಎಲ್ಲಾ ಉತ್ಪನ್ನಗಳನ್ನು ನಿಷೇಧಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿದೆ.

Share Post