National

ಕಾರ್ಮಿಕ ಸಂಘಟನೆಗಳಿಂದ ದೇಶಾದ್ಯಂತ ಮುಷ್ಕರ; ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ

ಕಾಸರಗೋಡು: ಖಾಸಗೀಕರಣ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ನೀಡಿರುವ ಭಾರತ್‌ ಬಂದ್‌ ಕರೆಗೆ ಕೇರಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಸರಗೋಡು ಸೇರಿದಂತೆ ಹಲವು ಕಡೆ ಅಂಗಡಿ ಮುಂಗಟ್ಟುಗಳು, ಬಸ್‌ ಓಡಾಟ ಎಲ್ಲವೂ ಬಂದ್‌ ಆಗಿದೆ.

ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್‌ ಮಾಡಿದ್ದಾರೆ. ಈ ಮೂಲಕ ಕಾರ್ಮಿಕ ಸಂಘಟನೆಗಳಿಗೆ ಬೆಂಬಲ ನೀಡಿದ್ದಾರೆ. ಇನ್ನು ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಸಂಚಾರವನ್ನೂ ನಿಲ್ಲಿಸಲಾಗಿದೆ. ಹಲವು ಕಚೇರಿಗಳು, ಚಿತ್ರಮಂದಿರಗಳು ಕೂಡಾ ಕೆಲವಡೆ ಬಂದ್‌ ಆಗಿವೆ. ಮುಷ್ಕರದ ಹಿನ್ನೆಲೆಯಲ್ಲಿ ಕೆಲವೆಡೆ ಶಾಲೆಗಳಿಗೂ ರಜೆ ನೀಡಲಾಗಿದೆ.

ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳನ್ನು ಪ್ರತಿಭಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಎಸ್ಮಾ ಬೆದರಿಕೆಯ ನಡುವೆಯೂ ರಸ್ತೆ ಸಾರಿಗೆ ನೌಕರರು ಮತ್ತು ವಿದ್ಯುತ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಹಣಕಾಸು ವಲಯಗಳು ಮುಷ್ಕರಕ್ಕೆ ಸೇರುತ್ತಿವೆ ಎಂದು ಅದು ಹೇಳಿದೆ.

Share Post