National

ಪೊಲೀಸ್‌ ಠಾಣೆಯಲ್ಲಿ ಮಕ್ಕಳ ಪಂಚಾಯಿತಿ: ಪೆನ್ಸಿಲ್‌ ಕದ್ದ ಬಾಲಕನಿಗೆ ಬುದ್ಧಿ ಹೇಳಿದ ಪೊಲೀಸ್

   ಪೆನ್ಸಿಲ್‌ ಕಳ್ಳತನ ಮಾಡಿದ್ದಾನೆಂದು ಸಹಪಾಠಿಯೊಬ್ಬನನ್ನು ಎಂಟು ವರ್ಷದ ಬಾಲಕ ಪೊಲೀಸ್‌ ಠಾಣೆಗೆ ಎಳೆದುಕೊಂಡುಬಂದ ಘಟನೆ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆ ಪೆದ್ದಕಡಬೂರು ಗ್ರಾಮದಲ್ಲಿ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

  ಎಂಟು, ಒಂಬತ್ತು ವರ್ಷ ವಯಸ್ಸುಳ್ಳ ಮಕ್ಕಳು ಪೆನ್ಸಿಲ್‌ ಕಳ್ಳತನದ ನೆಪವೊಡ್ಡಿ ಪೊಲೀಸ್‌ ಠಾಣೆಗೆ ಬಂದು ಗಮನ ಸೆಳೆದಿದ್ದಾರೆ. ಎಲ್ಲರೂ ಮೂರನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.  ಪೆದ್ದಕೆಡಬೂರು ಗ್ರಾಮದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಪಕ್ಕದ ಬಾಲಕ ಯಾವಾಗಲೂ ನನ್ನ ಪೆನ್ಸಿಲ್‌ ಕದಿಯುತ್ತಾನೆ ಎಂದು ಆರೋಪಿಸಿದ್ದಾನೆ. ಹೀಗಾಗಿ ಆತನ ಸ್ನೇಹಿತರ ಸಹಾಯದಿಂದ ಪೆನ್ಸಿಲ್‌ ಕದ್ದ ಬಾಲಕನನ್ನು ಹಿಡಿದು ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ. ಕೇಸ್‌ ದಾಖಲಿಸುವಂತೆ ಪಟ್ಟು ಹಿಡಿದಿದ್ದಾನೆ.

  ಕೇಸ್‌ ದಾಖಲು ಮಾಡಿದರೆ, ಬೇಲ್‌ ಪಡೆಯಬೇಕಾಗುತ್ತದೆ. ತಂದೆ-ತಾಯಿಗಳನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಬರಬೇಕಾಗುತ್ತದೆ. ಅವೆಲ್ಲಾ ಕಷ್ಟ. ಹೀಗಾಗಿ ಒಂದು ಬಾರಿ ಬಾಲಕನನ್ನು ಕ್ಷಮಿಸಬೇಕೆಂದು ಪೊಲೀಸ್‌ ಪೇದೆ ಕೋರಿದ್ದಾರೆ. ಇಬ್ಬರೂ ಚೆನ್ನಾಗಿ ಓದಬೇಕೆಂದು ಹೇಳಿ, ಕಳ್ಳತನ ಮಾಡಿದ ಹುಡುಗನನ್ನು ದಂಡಿಸಿದ್ದಾರೆ. ಇಬ್ಬರ ನಡುವೆ ರಾಜಿ  ಮಾಡಿಸಿ ಕಳುಹಿಸಿದ್ದಾರೆ.

Share Post