ಸಂಸತ್ತಿನಲ್ಲಿ ನಿಲ್ಲದ ಪ್ರತಿಭಟನೆ; ಇಂದು 33 ಸಂಸದರ ಅಮಾನತು!
ನವದೆಹಲಿ; ಸಂಸತ್ತಿನಲ್ಲಿ ಭದ್ರತಾಲೋಪ ಪ್ರಕರಣವು ಇಂದೂ ಉಭಯ ಸದನಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಈ ಬಗ್ಗೆ ಧರಣಿ ನಡೆಸುತ್ತಿರುವ ಸಂಸದರಿಗೆ ಉತ್ತರ ನೀಡದೆ ಕೇಂದ್ರ ತಪ್ಪಿಸಿಕೊಳ್ಳುತ್ತಿದೆ. ಇಂದು ಕೂಡ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಉಭಯ ಸದನಗಳಲ್ಲಿ ಕಲಾಪ ಸ್ಥಗಿತಗೊಂಡಿತು. ಈ ಹಿನ್ನೆಲೆಯಲ್ಲಿ ಲೋಕಸಭೆಯ ಸ್ಪೀಕರ್ ಸಂಸದರ ಮನವೊಲಿಸಲು ಯತ್ನಿಸಿದರು.. ಕೇಳದ ಕಾರಣ ಇಂದು ಇನ್ನೂ 33 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದರಿಂದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕೆ ಸಂಸದರಾದ ಟಿಆರ್ ಬಾಲು, ದಯಾನಿಧಿ ಮಾರನ್ ಮತ್ತು ಟಿಎಂಸಿ ಸಂಸದ ಸೌಗತ ರಾಯ್ ಸೇರಿದಂತೆ ಒಟ್ಟು 33 ವಿಪಕ್ಷ ಸಂಸದರನ್ನು ಇಂದು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಇಂದು ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣ ಅವರನ್ನು ಈ ಅಧಿವೇಶನ ಮುಗಿಯುವವರೆಗೆ ಅಮಾನತುಗೊಳಿಸುವ ನಿರ್ಧಾರವನ್ನು ಸ್ಪೀಕರ್ ತೆಗೆದುಕೊಂಡಿದ್ದಾರೆ. ಇಂದು ಮೂವರು ಸಂಸದರಾದ ಕೆ ಜಯಕುಮಾರ್, ವಿಜಯ್ ವಸಂತ್ ಮತ್ತು ಅಬ್ದುಲ್ ಖಲೇಖ್ ಅವರು ಸ್ಪೀಕರ್ ವೇದಿಕೆ ಮೇಲೆ ಹತ್ತಿ ಘೋಷಣೆಗಳನ್ನು ಕೂಗಿದರು. ಬಳಿಕ ಸಂಸದರ ಅಮಾನತಿಗೆ ಸದನ ಅನುಮೋದನೆ ನೀಡಿ ನಾಳೆಗೆ ಮುಂದೂಡಿತು.
ಕಳೆದ ವಾರ, ಲೋಕಸಭೆಯಲ್ಲಿ ಭುಗಿಲೆದ್ದ ಪ್ರತಿಭಟನೆಯ ಸಂದರ್ಭದಲ್ಲಿ 14 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಅವರಲ್ಲಿ 9 ಮಂದಿ ಕಾಂಗ್ರೆಸ್ ಸಂಸದರಿದ್ದರು. ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ಅವರು ಪ್ರತಿಭಟನೆ ನಡೆಸಿದರು ಮತ್ತು ಸ್ಪೀಕರ್ ಅವರನ್ನು ಅಮಾನತುಗೊಳಿಸಿದರು. ಇಂದು ಅದೇ ಘಟನೆಗಳು ಪುನರಾವರ್ತನೆಯಾದ ಕಾರಣ ಇನ್ನೂ 33 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಲೋಕಸಭೆಯಿಂದ ಅಮಾನತುಗೊಂಡಿರುವ ವಿರೋಧ ಪಕ್ಷದ ಸಂಸದರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಅವರನ್ನು ಕಳೆದ ವಾರ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.