ಪರಿಸರ ರಕ್ಷಣೆಗೆ ಒತ್ತು ನೀಡಲು ಪ್ರಧಾನಿ ಮೋದಿ ಕರೆ
ನವದೆಹಲಿ: ಪ್ರಕೃತಿಯನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಲೂ ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟಿವೆ. ನಾವು ಅವುಗಳನ್ನು ಉಳಿಸೋಣ. ಅವುಗಳನ್ನು ಮೂಲ ರೂಪಕ್ಕೆ ತರೋಣ. ಇದು ನಮ್ಮೆಲ್ಲರ ಹಿತಾಸಕ್ತಿಯಾಗಬೇಕು ಎಂದು ಕರೆ ನೀಡಿದರು.
ಇತ್ತೀಚೆಗೆ ದೇಶದಲ್ಲಿ ಕೊರೊನಾ ಹೊಸ ತಳಿ ಹರಡುವ ಭೀತಿ ಉಂಟಾಗುತ್ತಿದೆ. ಜೊತೆಗೆ ವಾಯು ಮಾಲಿನ್ಯವೂ ಪದೇ ಪದೇ ಹೆಚ್ಚಾಗುತ್ತಲೇ ಇದೆ. ಇದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣ ಮಾಡುತ್ತಿದೆ. ಇದರ ಬೆನ್ನಲ್ಲೆ ಜನಸಾಮಾನ್ಯರಲ್ಲಿ ಪರಿಸರ ಕಾಳಜಿಗಾಗಿ ಮೋದಿ ಮನವಿ ಮಾಡಿದ್ದಾರೆ.
ಜೊತೆಗೆ ‘ಶೌರ್ಯವನ್ನು ಯುದ್ಧಭೂಮಿಯಲ್ಲಿ ಮಾತ್ರ ತೋರಿಸಬೇಕಾಗಿಲ್ಲ. ಅದನ್ನು ವಿಸ್ತರಿಸಿದಾಗ ಪ್ರತಿಯೊಂದು ಕ್ಷೇತ್ರದಲ್ಲೂ ಅನೇಕ ಕೆಲಸಗಳು ಪ್ರಾರಂಭವಾಗುತ್ತವೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರು ಹಲವಾರು ಪ್ರಯೋಜನ ಪಡೆಯುತ್ತಿದ್ದಾರೆ. ದೇಶವು ಸ್ವಾತಂತ್ರ್ಯದ ಅಮೃತ ಹಬ್ಬವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯದ ಅಮೃತೋತ್ಸವ ಕಲಿಕೆಯೊಂದಿಗೆ ದೇಶಕ್ಕಾಗಿ ಏನನ್ನಾದರೂ ಮಾಡಲು ಸ್ಫೂರ್ತಿ ನೀಡುತ್ತದೆ. ಈಗ ಈ ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಸರಣಿಯು ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ’ ಎಂದು ಮೋದಿ ಅವರು 83 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.