28 ಮನೆಗಳ ಒಡೆಯ ವಾಸುದೇವ್ ಅರೆಸ್ಟ್, ನ್ಯಾಯಾಂಗ ಬಂಧನ
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್.ಎನ್.ವಾಸುದೇವ್ ಅವರನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಾಸುದೇವ್ ಆರ್. ಎನ್. ಅವರು, 28 ಮನೆ, 16 ನಿವೇಶನ, 5 ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆಂದು ತಿಳಿದುಬಂದಿದೆ.
ಗುರುವಾರ ಎಸಿಬಿ ಅಧಿಕಾರಿಗಳು ರಾಜ್ಯದ 68 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದರು. ಆಗ ವಾಸುದೇವ್ ಆರ್. ಎನ್. ಅವರ ಆಸ್ತಿಗಳ ಮೇಲೂ ದಾಳಿ ಮಾಡಿ, ಅಪಾರ ಪ್ರಮಾಣದ ಆಸ್ತಿಯನ್ನು ವಶಪಡಿಸಿಕೊಂಡಿದ್ದರು.
ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಚಿನ್ನದ ಒಡವೆಗಳು 925.69 ಗ್ರಾಂ, ಬೆಳ್ಳಿಯ ಸಾಮಾನುಗಳು 9 ಕೆಜಿ, ರೂ. 17,27,200 ನಗದು ಹಣ, ವಿವಿಧ ಬ್ಯಾಂಕ್ ಖಾತೆಗಳಲ್ಲಿ 1,31,00,000 ರೂ. ಹಣ ದೊರಕಿದೆ. ಒಟ್ಟು ಆಸ್ತಿ ಮೌಲ್ಯ 19,70,63,868 ರೂ. ಎಂದು ಅಂದಾಜಿಸಲಾಗಿದೆ. ಆರೋಪಿತರ ಅಕ್ರಮ ಆಸ್ತಿಯ ಪ್ರಮಾಣ ಶೇ 879.53 ಕಂಡುಬಂದಿದೆ.