NationalPolitics

ನಾಳೆ ಮಹಾ ಸರ್ಕಾರದ ಬಹುಮತ ಸಾಬೀತು ಪ್ರಕ್ರಿಯೆ; ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಉದ್ಧವ್‌ ಟೀಂ

ಮುಂಬೈ; ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಸೂಚನೆ ನೀಡಿದ್ದಾರೆ. ಆದ್ರೆ ಇದರ ವಿರುದ್ಧ ಶಿವಸೇನಾ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. 16 ಬಂಡಾಯ ಶಾಸಕರ ಅನರ್ಹತೆ ಪ್ರಕ್ರಿಯೆ ಬಗ್ಗೆ ಸುಪ್ರೀಂ ಕೋರ್ಟ್‌ ನಿರ್ಧಾರ ಹೊರಬೀಳುವ ಮೊದಲೇ ಬಹುಮತ ಸಾಬೀತಿಗೆ ಸೂಚನೆ ನೀಡಲಾಗಿದೆ. ಇದು ಕಾನೂನು ಬಾಹಿರ ಎಂದು ಶಿವಸೇನಾ ನಾಯಕ ಸಂಜಯ್‌ ರಾವುತ್‌ ಹೇಳಿದ್ದಾರೆ.

ಬಂಡಾಯ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಜುಲೈ 11ರವರೆಗೆ ಮುಂದೂಡಿದೆ. ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದು ಹಿರಿಯ ಮುಖಂಡ ಪೃಥ್ವಿರಾಜ್‌ ಚವಾಣ್‌ ಹೇಳಿದ್ದಾರೆ. ಶಾಸಕಾಂಗ ಪಕ್ಷದಲ್ಲಿ ತಮಗೆ ಮೂರನೇ ಎರಡರಷ್ಟು ಬೆಂಬಲವಿದೆ ಮತ್ತು ಬೇರೆ ಪಕ್ಷದ ಜೊತೆಗೆ ವಿಲೀನಗೊಳ್ಳಲಿದ್ದೇವೆ ಎಂದು ಬಂಡಾಯ ಶಾಸಕರು ಪತ್ರವನ್ನು ನೀಡಬೇಕಾಗುತ್ತದೆ. ಶಿವಸೇನಾ ಶಾಸಕಾಂಗ ಪಕ್ಷವು ಇಬ್ಭಾಗಗೊಂಡಿರುವುದನ್ನು ಉಪಸಭಾಪತಿ ಮಾನ್ಯ ಮಾಡಲಿದ್ದಾರೆ. ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಬಂಡಾಯ ಶಾಸಕರು ಎಂವಿಎ ವಿರುದ್ಧ ಮತ ಹಾಕಿದರೆ ಅವರು ಅನರ್ಹಗೊಳ್ಳಲಿದ್ದಾರೆ ಎಂದು ಚವಾಣ್ ತಿಳಿಸಿದ್ದಾರೆ.

Share Post