NationalPolitics

ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ; ಮುಗಿಯಿತಾ I.N.D.I.A ಒಕ್ಕೂಟದ ಕಥೆ..?

ನವದೆಹಲಿ; ಪಂಚರಾಜ್ಯಗಳ ಚುನಾವಣೆ ದೊಡ್ಡ ಗೆಲುವು ನಿರೀಕ್ಷಿಸಿದ್ದ ಕಾಂಗ್ರೆಸ್‌, ಫಲಿತಾಂಶಕ್ಕೆ ಮೊದಲೇ INDIA ಒಕ್ಕೂಟದ ಸಭೆಗೆ ಕರೆ ನೀಡಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಡಿಸೆಂಬರ್‌ 6ರಂದು ದೆಹಲಿಯಲ್ಲಿ INDIA ಒಕ್ಕೂಟದ ಮೂರನೇ ಸಭೆ ನಡೆಸುವುದಾಗಿ ಘೋಷಣೆ ಮಾಡಿದ್ದರು. ಅಂದುಕೊಂಡಂತೆ ಆಗಿದ್ದರೆ ಇಂದು INDIA ಒಕ್ಕೂಟದ ಸಭೆ ದೆಹಲಿಯಲ್ಲಿ ನಡೆಯಬೇಕಿತ್ತು. ಆದ್ರೆ ಅದರ ಸುಳಿವೇ ಇಲ್ಲ. ಯಾವ ಮುನ್ಸೂಚನೆಯೂ ಇಲ್ಲದೆ ದೆಹಲಿಯಲ್ಲಿ ಇಂದು ನಡೆಯಬೇಕಿದ್ದ INDIA ಒಕ್ಕೂಟದ ಸಭೆಯನ್ನು ರದ್ದು ಮಾಡಲಾಗಿದೆ. ಮುಂದೆ ನಡೆಯುತ್ತೋ ಇಲ್ಲವೋ ಅನ್ನೋದು ಕೂಡಾ ಗೊತ್ತಿಲ್ಲ. ಇದಕ್ಕೆಲ್ಲಾ ಕಾರಣ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕಾದ ತೀವ್ರ ಮುಖಭಂಗ. ಕನಿಷ್ಠ ಮೂರು ರಾಜ್ಯಗಳನ್ನಾದರೂ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಮಲ್ಲಿಕಾರ್ಜುನ ಖರ್ಗೆಯವರು INDIA ಒಕ್ಕೂಟದ ಸಭೆಯನ್ನು ಘೋಷಿಸಿದ್ದರು. ಆದ್ರೆ ಕಾಂಗ್ರೆಸ್‌ ಸೋತಿದ್ದರಿಂದ ಕಾಂಗ್ರೆಸ್‌ ನಾಯಕರಿಗೂ ಈ ಪರಿಸ್ಥಿತಿಯಲ್ಲಿ INDIA ಒಕ್ಕೂಟದ ಸಭೆ ನಡೆಸೋದು ಪಥ್ಯ ಎನಿಸಿಲ್ಲ. ಇನ್ನು INDIA ಒಕ್ಕೂಟದ ಮಿತ್ರಪಕ್ಷಗಳು ಕೂಡಾ ನಿಧಾನವಾಗಿ INDIA ಒಕ್ಕೂಟ ಎಂದರೆ ಅಪಥ್ಯ ಎನ್ನುವ ಮಟ್ಟಕ್ಕೆ ಬಂದು ನಿಂತಿವೆ.

ಅಂದಹಾಗೆ, ಪಂಚ ರಾಜ್ಯಗಳ ಚುನಾವಣೆ ಮೇಲೆ ಕಾಂಗ್ರೆಸ್‌ ಸಾಕಷ್ಟು ವಿಶ್ವಾಸವಿಟ್ಟಿತ್ತು. ಅದರಲ್ಲೂ ತೆಲಂಗಾಣ, ಮಧ್ಯಪ್ರದೇಶ ಹಾಗೂ ಛತ್ತಿಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರೋ ಆಸೆಯಲ್ಲಿತ್ತು.. ಆದ್ರೆ ಕಾಂಗ್ರೆಸ್‌ಗೆ ದಕ್ಕಿದ್ದು ಕೇವಲ ತೆಲಂಗಾಣ ಮಾತ್ರ. ಉಳಿದ ನಾಲ್ಕು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢ ಹಾಗೂ ಮಿಜೋರಾಂನಲ್ಲಿ ಕಾಂಗ್ರೆಸ್‌ ಮುಗ್ಗರಿಸಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಇದು ಕಾಂಗ್ರೆಸ್‌ ಪಕ್ಷವನ್ನು ಕಂಗೆಡಿಸಿದ್ದರೆ, ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳಿಗೆ ಕಾಂಗ್ರೆಸ್‌ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ.

ಒಂದು ಕಡೆ INDIA ಒಕ್ಕೂಟದ ಮಿತ್ರ ಪಕ್ಷವಾದ ಸಮಾಜವಾದಿ ಪಾರ್ಟಿ ಕಾಂಗ್ರೆಸ್‌ ವಿರುದ್ಧ ಪೋಸ್ಟರ್‌ ವಾರ್‌ ನಡೆಸುತ್ತಿದೆ. ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್‌ ಯಾದವ್‌, ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೇ ನೇರವಾಗಿ ಹೋರಾಡಬೇಕು ಎನ್ನುವ ಮೂಲಕ ನಾವು ಕಾಂಗ್ರೆಸ್‌ನಿಂದ ದೂರ ಅನ್ನೋದನ್ನು ಪರೋಕ್ಷವಾಗಿ ಹೇಳಿ ಆಗಿದೆ. ಇನ್ನೊಂದೆಡೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡಾ ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ಸೋಲು ಜನರ ಸೋಲು ಅಂತ ಕಾಂಗ್ರೆಸ್‌ ಬಿಂಬಿಸುತ್ತಿದೆ. ಆದ್ರೆ ಮಮತಾ ಬ್ಯಾನರ್ಜಿ ಮಾತ್ರಿ ಇದು ಜನರ ಸೋಲಲ್ಲ. ಈ ಸೋಲಿಗೆ ನೇರ ಹೊಣೆ ಕಾಂಗ್ರೆಸ್‌ ಪಕ್ಷ ಎಂದು ಹೇಳುತ್ತಿದೆ. ಇನ್ನೊಂದೆಡೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರೇ ಮುಂದೆ ನಿಂತು ಬಿಜೆಪಿ ವಿರುದ್ಧ ಪರ್ಯಾಯ ಒಕ್ಕೂಟ ರಚನೆಗೆ ಕಾರಣರಾಗಿದ್ದರು. ಜೊತೆಗೆ ಅವರೇ ಒಕ್ಕೂಟದ ಮುಖ್ಯಸ್ಥರಾಗಬೇಕು ಅನ್ನೋ ಆಸೆ ಕೂಡಾ ಇದೆ. ಆದ್ರೆ INDIA ಒಕ್ಕೂಟದಲ್ಲಿ ನಿತೀಶ್‌ ಕುಮಾರ್‌ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸೋದಕ್ಕೆ ರೆಡಿ ಇಲ್ಲ. ಈ ಕಾರಣದಿಂದ ಜೆಡಿಯು ಪಕ್ಷ ಕೂಡಾ ಈಗ INDIA ಒಕ್ಕೂಟದ ವಿಚಾರದಲ್ಲಿ ಮೌನವಾಗಿದೆ.

ಎಎಪಿ ಪಕ್ಷದ ನಾಯಕರು ಹಲವು ಕೇಸ್‌ಗಳಿಂದಾಗಿ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಇರುವ ಅಧಿಕಾರ ಉಳಿಸಿಕೊಳ್ಳೋದೇ ಅವರಿಗೆ ದೊಡ್ಡ ಸವಾಲಾಗಿದೆ. ಹೀಗಿರುವಾಗಿ ಎಎಪಿ ನಾಯಕರು ಕೂಡಾ INDIA ಒಕ್ಕೂಟದ ಕಡೆ ಹೆಚ್ಚು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಸೇರಿದಂತೆ ಬಹುತೇಕರು ಇಂದು ನಡೆಯಬೇಕಿದ್ದ INDIA ಒಕ್ಕೂಟದ ಸಭೆಗೆ ಬರೋದಕ್ಕೆ ಆಗೋದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ INDIA ಒಕ್ಕೂಟದ ಮೂರನೇ ಸಭೆ ರದ್ದಾಗಿಬಿಟ್ಟಿದೆ. ಡಿಸೆಂಬರ್‌ ಕೊನೆಯ ವಾರದಲ್ಲಿ ನಡೆಯಬಹುದು ಎಂದು ಕೆಲವರು ಹೇಳುತ್ತಿದ್ದಾರಾದರೂ, ಅದನ್ನು ದೃಢಪಡಿಸೋರು ಮಾತ್ರ ಯಾರೂ ಇಲ್ಲ.

ಇನ್ನೊಂದೆಡೆ ಚುನಾವಣೆಯಲ್ಲಿ ಸೋಲಾದರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿದೇಶದತ್ತ ಮುಖ ಮಾಡುತ್ತಾರೆ. ಈ ಬಾರಿಯೂ ಕೂಡಾ ಅವರು ವಿದೇಶಕ್ಕೆ ಹಾರಲು ರೆಡಿಯಾಗಿ ನಿಂತಿದ್ದಾರೆ. ನಾಳೆ ಅಂದ್ರೆ ಗುರುವಾರ ತೆಲಂಗಾಣದಲ್ಲಿ ರೇವಂತ್‌ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಆ ಸಮಾರಂಭಕ್ಕಾಗಿ ರಾಹುಲ್‌ ಕಾಯುತ್ತಿದ್ದಾರೆ. ಅದು ಮುಗಿಯುತ್ತಿದ್ದಂತೆ ಡಿಸೆಂಬರ್‌ 8ರಂದು ಅವರು ವಿದೇಶಕ್ಕೆ ಹಾರಲಿದ್ದಾರೆ. ವಿಯೆಟ್ನಾಂ, ಸಿಂಗಾಪುರ, ಇಂಡೋನೇಷ್ಯಾ, ಮಲೇಷ್ಯಾ, ಬ್ರೂನಿ ಮುಂತಾದ ದೇಶಗಳಲ್ಲಿ ರಾಹುಲ್‌ ಸುತ್ತಾಟ ನಡೆಸಲಿದ್ದಾರೆ. ಅಲ್ಲಿನ ಅನಿವಾಸಿ ಭಾರತೀಯರ ಜೊತೆ ಸಂವಾದಗಳನ್ನು ನಡೆಸಲಿರುವ ರಾಹುಲ್‌ ಗಾಂಧಿ ಡಿಸೆಂಬರ್‌ 15ರಂದು ಭಾರತಕ್ಕೆ ವಾಪಸ್ಸಾಗಲಿದ್ದಾರೆ. ಅನಂತರ INDIA ಒಕ್ಕೂಟದ ಕಥೆ ಏನಾಗುತ್ತದೋ ನೋಡಬೇಕು.

Share Post