ಎಂಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣ; ಶೀಘ್ರ ವಿಚಾರಣೆಗೆ ವಿಶೇಷ ನ್ಯಾಯಾಲಯ
ಬೆಂಗಳೂರು; ಎಂಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಸ್ಪೆಷಲ್ ಕೋರ್ಟ್ ರಚನೆ ಹಾಗೂ ಅದಕ್ಕೆ ಪೂರ್ಣವಧಿ ನ್ಯಾಯಾಧೀಶರ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಸೂಚಿದ್ದಾರೆ. ಈ ಬಗ್ಗೆ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಟಿಪ್ಪಣಿ ಮೂಲಕ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಕನ್ನಡ ಸಾಹಿತ್ಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರನ್ನು ಬೇರೆ ಬೇರೆ ಸಮಯದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇಬ್ಬರನ್ನೂ ಒಂದೇ ರೀತಿಯಲ್ಲಿ ಕೊಲೆ ಮಾಡಿದ್ದರಿಂದ ಇಬ್ಬರನ್ನೂ ಕೊಲೆ ಮಾಡಿದ್ದು ಒಂದೇ ಗುಂಪು ಎಂದು ಹೇಳಲಾಗಿದೆ. ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ರೆ ಇದಕ್ಕೆ ಸುಪಾರಿ ಕೊಟ್ಟವರು ಯಾರು..? ಕೊಲೆ ಉದ್ದೇಶ ಏನು ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ. ಇನ್ನು ಪ್ರಕರಣಗಳ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಎಂಎಂ ಕಲಬುರ್ಗಿ ಅವರನ್ನು ಧಾರವಾಡದ ಅವರ ಮನೆಯ ಬಾಗಿಲಿನಲ್ಲಿ 2015 ಆಗಸ್ಟ್ 31ರಂದು ಗುಂಡಿಕ್ಕಿ ಕೊಲ್ಲಲಾಗಿತ್ತು. ಗೌರಿ ಲಂಕೇಶ್ ಅವರನ್ನು 2017, ಸೆಪ್ಟೆಂಬರ್ 05 ರಂದು ಬೆಂಗಳೂರಿ ಆರ್‌ಆರ್ ನಗರದ ಅವರ ಮನೆ ಬಳಿಯೇ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಗಳ ಸಂಬಂಧ ಪೊಲೀಸರು ಇದುವರೆಗೆ 18 ಮಂದಿಯನ್ನು ಬಂಧಿಸಿದ್ದಾರೆ.