ಸೇನಾ ಹೆಲಿಕಾಪ್ಟರ್ ದುರಂತ: ಘಟನಾ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆ
ವೆಲ್ಲಿಂಗ್ಟನ್: ಕೊನೆಗೂ ಕೂನೂರು ಸೇನಾ ಹೆಲಿಕಾಪ್ಟರ್ ದುರಂತ ಸ್ಥಳದಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ನಿನ್ನೆಯಿಂದ ಸೇನಾ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಬ್ಲ್ಯಾಕ್ ಬಾಕ್ಸ್‌ಗಾಗಿ ಶೋಧ ನಡೆಸುತ್ತಿದ್ದರು. ಆದರೆ ಎಷ್ಟು ಹುಡುಕಾಡಿದರೂ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಬ್ಲ್ಯಾಕ್ಸ್ ಬಾಕ್ಸ್ ಪತ್ತೆಯಾಗಿದ್ದು, ಅದರಲ್ಲಿ ರೆಕಾರ್ಡ್ ಆಗಿರುವ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಇದರಲ್ಲಿ ರೆಕಾರ್ಡ್ ಆಗಿರುವ ಮಾಹಿತಿಯಿಂದ ದುರಂತಕ್ಕೆ ಕಾರಣ ತಿಳಿಯಬಹುದಾಗಿದೆ.
ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿ ಈ ಬ್ಲ್ಯಾಕ್ ಬಾಕ್ಸ್ ಅಳವಡಿಸಲಾಗಿರುತ್ತದೆ. ಇದು ಕಿತ್ತಳೆ ಬಣ್ಣದ್ದಾಗಿರುತ್ತದೆ. ಕಾಕ್‌ಪಿಟ್ ಸಂಭಾಷಣೆಯನ್ನು ಇದು ರೆಕಾರ್ಡ್ ಮಾಡಿಡುತ್ತದೆ. ಈ ಮಾಹಿತಿಯಿಂದ ದುರಂತಕ್ಕೆ ಕಾರಣ ತಿಳಿಯಬಹುದಾಗಿದೆ. ಇನ್ನು ಘಟನೆಯಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣ್ ಸಿಂಗ್ ಅವರು ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡಬಲ್ಲರು. ಆದರೆ, ಅವರಿಗೆ ಶೇ.80ರಷ್ಟು ಸುಟ್ಟಗಳಾಗಿವೆ. ಅವರಿಗೆ ತಮಿಳುನಾಡಿನ ವೆಲ್ಲಿಂಗ್ಟನ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚೇತರಿಕೆ ಕಂಡ ಮೇಲೆಯೇ ಅವರಿಂದ ಮಾಹಿತಿ ಗೊತ್ತಾಗುತ್ತದೆ.