NationalPolitics

ತೆಲಂಗಾಣ ಗೆಲ್ಲಲು ಕಾಂಗ್ರೆಸ್‌ ಮೆಗಾ ಪ್ಲ್ಯಾನ್;‌ ಶರ್ಮಿಳಾ ಪಾರ್ಟಿ ವಿಲೀನ ಪಕ್ಕಾ

ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಪುತ್ರಿ ವೈ.ಎಸ್‌.ಶರ್ಮಿಳಾ ಕಾಂಗ್ರೆಸ್‌ ಸೇರೋದು ಬಹುತೇಕ ಪಕ್ಕಾ ಆಗಿದೆ. ಕೆಲ ವರ್ಷಗಳ ಹಿಂದೆ ಅವರು ತೆಲಂಗಾಣದಲ್ಲಿ ವೈಎಸ್‌ಆರ್‌ ತೆಲಂಗಾಣ ಪಾರ್ಟಿ ಸ್ಥಾಪನೆ ಮಾಡಿದ್ದರು. ತೆಲಂಗಾಣ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಜನರ ಮನಸ್ಸು ಗೆಲ್ಲೋ ಪ್ರಯತ್ನ ಮಾಡಿದ್ದರು. ಆದ್ರೆ ಅಂದುಕೊಂಡ ಮಟ್ಟಿಗೆ ಶರ್ಮಿಳಾಗೆ ಜನ ಬೆಂಬಲ ಸಿಗಲಿಲ್ಲ. ಹೀಗಾಗಿ ಶರ್ಮಿಳಾ ಅವರು ಕಾಂಗ್ರೆಸ್‌ ಪಕ್ಷದೊಂದಿಗೆ ತಮ್ಮ ಪಕ್ಷವನ್ನು ವಿಲೀನ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕೂಡಾ ಗ್ರೀನ್‌ ಸಿಗ್ನಲ್‌ ನೀಡಿದೆ ಎನ್ನಲಾಗಿದೆ.

ಆಗಸ್ಟ್‌ ಎರಡನೇ ವಾರದಲ್ಲಿ ವೈ.ಎಸ್‌.ಶರ್ಮಿಳಾ ಅವರು ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಕ್ಕೂ ಮೊದಲು ಒಂದೆರಡು ಬಾರಿ ಬೆಂಗಳೂರಿಗೆ ಬಂದು ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದರು. ಇದೀಗ ಶರ್ಮಿಳಾ ಅವರು ತಮ್ಮ ಪತಿಯೊಂದಿಗೆ ತೆರಳಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್‌ ಬಳಿ ಕೊನೆಯ ಹಂತದ ಚರ್ಚೆಗಳಾಗಿದ್ದು, ಶರ್ಮಿಳಾ ಅವರ ವೈಎಸ್‌ಆರ್‌ ತೆಲಂಗಾಣ ಪಾರ್ಟಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ತೆಲಂಗಾಣದಲ್ಲಿ ನಾವಾವೇಷವಿಲ್ಲದೇ ಹೋಗಿದ್ದ ಕಾಂಗ್ರೆಸ್‌ ಪಾರ್ಟಿಯನ್ನು ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ರೇವಂತ್‌ ರೆಡ್ಡಿಯವರು ಸಾಕಷ್ಟು ಶ್ರಮ ವಹಿಸಿ ಬೆಳೆಸಿದ್ದಾರೆ. ಮುಂದಿನ ವರ್ಷ ತೆಲಂಗಾಣದಲ್ಲಿ ಮುಂದಿನ ವರ್ಷ ಚುನಾವಣೆ ಇದ್ದು, ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸೋದಕ್ಕೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಶರ್ಮಿಳಾ ಕಾಂಗ್ರೆಸ್‌ ಸೇರಲು ಆಸಕ್ತಿ ತೋರಿದಾಗ ರೇವಂತ್‌ ರೆಡ್ಡಿ ಅದನ್ನು ವಿರೋಧ ಮಾಡಿದ್ದರು. ಶರ್ಮಿಳಾ ಅವರ ಪಾರ್ಟಿ ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವುದು ಬೇಡ, ಶರ್ಮಿಳಾಗೆ ತೆಲಂಗಾಣದಲ್ಲಿ ಪ್ರಮುಖ ಸ್ಥಾನ ಕೊಡುವುದು ಬೇಡ ಎಂದು ಹೈಕಮಾಂಡ್‌ ಬಳಿ ಮನವಿ ಮಾಡಿದ್ದರು. ಆದ್ರೆ ಕಾಂಗ್ರೆಸ್‌ ಹೈಕಮಾಂಡ್‌ ಇದಕ್ಕೆ ಮನ್ನಣೆ ಕೊಟ್ಟಿಲ್ಲ. ಶರ್ಮಿಳಾ ಅವರನ್ನು ಬಳಸಿಕೊಂಡು ತೆಲಂಗಾಣದಲ್ಲಿ ಕಾಂಗ್ರೆಸ್‌ ಪಾರ್ಟಿಯನ್ನು ಅಧಿಕಾರಕ್ಕೆ ತರೋದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ ಮಾಡಿದೆ.

ಅಖಂಡ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ಪಾರ್ಟಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದವರು ವೈ.ಎಸ್‌.ರಾಜಶೇಖರೆಡ್ಡಿಯವರು. ಅವರು ಸಿಎಂ ಆಗಿದ್ದಾಗಲೇ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದರು. ಈ ವೇಳೆ ಕಾಂಗ್ರೆಸ್‌ನ ಬಹುತೇಕ ಶಾಸಕರು ರಾಜಶೇಖರರೆಡ್ಡಿ ಪುತ್ರ ಜಗನ್‌ಮೋಹನ್‌ ರೆಡ್ಡಿಯವರಿಗೆ ಸಿಎಂ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದ್ರೆ ಕಾಂಗ್ರೆಸ್‌ ಹೈಕಮಾಂಡ್‌ ರೋಸಯ್ಯಗೆ ಸಿಎಂ ಸ್ಥಾನ ನೀಡಿತ್ತು. ಇದರಿಂದಾಗಿ ಆಕ್ರೋಶಗೊಂಡು ಜಗನ್‌ಮೋಹನ್‌ ರೆಡ್ಡಿ ಸ್ವಂತ ಪಾರ್ಟಿ ಕಟ್ಟಿದರು. ಇದರ ನಡುವೆ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ, ಆಂಧ್ರಪ್ರದೇಶದ ವಿಭಜನೆಗೆ ಅವಕಾಶ ಮಾಡಿಕೊಡ್ತು. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಎಂದು ಭಾಗವಾದ ಮೇಲೆ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಹೆಸರಿಲ್ಲದಂತಾಯಿತು.

ತೆಲಂಗಾಣ ರಾಜ್ಯ ರಚನೆಯಾದ ಮೇಲೆ ಬಿಆರ್‌ಎಸ್‌ ಪಾರ್ಟಿ ಅಧಿಕಾರ ನಡೆಸುತ್ತಿದೆ. ಆದ್ರೆ ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣವಿದೆ. ಈ ನಡುವೆ ವೈ.ಎಸ್‌.ಶರ್ಮಿಳಾ ಕೂಡಾ ಕಾಂಗ್ರೆಸ್‌ಗೆ ಬಂದರೆ ಕಾಂಗ್ರೆಸ್‌ ಬಲ ಹೆಚ್ಚುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಹೈಕಂಮಾಂಡ್‌ದು. ಇನ್ನು ವೈಎಸ್‌ಆರ್‌ ಪುತ್ರಿಯಾಗಿರುವುದರಿಂದ ಆಕೆಯನ್ನು ಮುಂದಿಟ್ಟುಕೊಂಡು ಸಿಂಪಥಿ ಮತಗಳನ್ನು ಪಡೆಯೋದಕ್ಕೂ ಕಾಂಗ್ರೆಸ್‌ ಹೈಕಮಾಂಡ್‌ ಪ್ಲ್ಯಾನ್‌ ಮಾಡಿದೆ ಎನ್ನಲಾಗುತ್ತಿದೆ.

ಇನ್ನು ಆಂಧ್ರಪ್ರದೇಶದಲ್ಲಿ ಶರ್ಮಳಾ ಅವರ ಸಹೋದರ ಜಗನ್‌ಮೋಹನ್‌ ರೆಡ್ಡಿ ಸಿಎಂ ಆಗಿದ್ದಾರೆ. ಆದ್ರೆ ಶರ್ಮಳಾಗೂ ಜಗನ್‌ ಮೋಹನ್‌ ರೆಡ್ಡಿಗೂ ವೈಮನಸ್ಯವಿದೆ. ಇದರ ಲಾಭ ಪಡೆಯೋದಕ್ಕೂ ಕಾಂಗ್ರೆಸ್‌ ಮುಂದಾಗಿದೆ. ತೆಲಂಗಾಣದಲ್ಲಿ ಉತ್ತಮ ಸ್ಥಾನಮಾನ ಕೊಡುತ್ತೇವೆ. ಹೀಗಾಗಿ ನೀವು ಆಂಧ್ರಪ್ರದೇಶದಲ್ಲೂ ಕಾಂಗ್ರೆಸ್‌ ಪರ ಪ್ರಚಾರ ನಡೆಸಬೇಕು. ನಿಮ್ಮ ಸಹೋದರನ ವಿರುದ್ಧ ಕೆಲಸ ಮಾಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ ಪಕ್ಷ ಶರ್ಮಿಳಾ ಮುಂದಿಟ್ಟಿದೆ ಎನ್ನಲಾಗಿದೆ. ಇದಕ್ಕೂ ಶರ್ಮಿಳಾ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಶರ್ಮಿಳಾ ಅವರ ಪಾರ್ಟಿ ಕಾಂಗ್ರೆಸ್‌ ಜೊತೆ ವಿಲೀನವಾಗೋದು ಬಹುತೇಕ ಪಕ್ಕಾ.

Share Post