BengaluruDistricts

ಗಡಿ ಭಾಗದಲ್ಲಿ ಎಲೆಮರೆಕಾಯಿಯಂತಿದ್ದ ಶಿಕ್ಷಕ ಶ್ರೀನಿವಾಸಮೂರ್ತಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಬೆಂಗಳೂರು; ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತಿಪ್ಪಾರೆಡ್ಡಿಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀನಿವಾಸಮೂರ್ತಿಯವರನ್ನು ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಎಂದು ಆಯ್ಕೆ ಮಾಡಲಾಗಿದ್ದು, ಡಾ.ಎಸ್‌.ರಾಧಾಕೃಷ್ಣನ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯ ಪ್ರತಿಭಾ ಆಕಾಡೆಮಿ ವತಿಯಿಂದ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಮಟ್ಟದ ಸಾಧನೆ ಮಾಡಿರುವ ಶ್ರೀನಿವಾಸಮೂರ್ತಿಯವರಿಗೆ ನೀಡಲಾಗಿದೆ. ಬೆಂಗಳೂರಿನ ಪುಟ್ಟಣ್ಣಶೆಟ್ಟಿ ಪುರಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶ್ರೀನಿವಾಸಮೂರ್ತಿಯವರು 1994ರಲ್ಲಿ ಶಿಕ್ಷಕರಾಗಿ ಸೇವೆ ಶುರು ಮಾಡಿದ್ದು, ಅವರು ಸುಮಾರು ಮೂವತ್ತು ವರ್ಷಗಳಿಂದ ಗಡಿ ಭಾಗದಲ್ಲೇ ಕೆಲಸ ಮಾಡಿದ್ದಾರೆ. ತೆಲುಗು ಪ್ರಭಾವ ಹೆಚ್ಚಿರುವ ಹಾಗೂ ಬಡತನ ತಾಂಡವವಾಡುತ್ತಿರುವ ಪ್ರದೇಶದಲ್ಲಿ ಸೇವೆ ಸಲ್ಲಿಸಿರುವ ಶ್ರೀನಿವಾಸ ಮೂರ್ತಿಯವರು, ವಿಜ್ಞಾನ ಮತ್ತು ಗಣಿತವನ್ನು ಬಹಳ ಸರಳವಾಗಿ ಮಕ್ಕಳಿಗೆ ಹೇಳಿಕೊಟ್ಟು, ಮಕ್ಕಳ ಏಳ್ಗೆಗೆ ಶ್ರಮಿಸಿದ್ದಾರೆ. ತಮ್ಮ ಸ್ವಂತ ಪರಿಶ್ರಮದಿಂದ ವಿಜ್ಞಾನ ಹಾಗೂ ಗಣಿತ ಪ್ರದರ್ಶನಗಳನ್ನು ಏರ್ಪಡಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಶ್ರೀನಿವಾಸಮೂರ್ತಿಯವರಿಗೆ ಈ ಮೊದಲು ಅಂತಾರಾಷ್ಟ್ರೀಯ ಪ್ರಶಸ್ತಿ ಕೂಡಾ ಲಭಿಸಿತ್ತು.

ಶ್ರೀನಿವಾಸಮೂರ್ತಿಯವರು ಮೊದಲಿಗೆ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 1994ರಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಅಲ್ಲಿ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು. ಅನಂತರ ಮತ್ತೊಂದು ಆಂಧ್ರ ಗಡಿಭಾಗವಾದ ಓಬುಳಾಪುರ ಪ್ರೌಢಶಾಲೆಗೆ ವರ್ಗಾವಣೆಯಾದರು. ಅಲ್ಲೂ ಕೂಡಾ ಒಳ್ಳೆಯ ಹೆಸರು ಗಳಿಸಿದ ಶ್ರೀನಿವಾಸಮೂರ್ತಿಯವರು ಸದ್ಯ ತಿಪ್ಪಾರೆಡ್ಡಿಹಳ್ಳಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

Share Post