ವಿವಾದವೆಬ್ಬಿಸಿದ ಉದಯನಿಧಿ ಸ್ಟಾಲಿನ್ ಹೇಳಿಕೆ; ಪೇಜಾವರ ಸ್ವಾಮೀಜಿ ಖಂಡನೆ
ಮೈಸೂರು; ಸನಾತನ ಧರ್ಮದ ವಿಚಾರವಾಗಿ ತಮಿಳುನಾಡು ಸರ್ಕಾರದ ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ದೇಶದೆಲ್ಲಡೆಯಿಂದ ಆಕ್ರೋಶಗಳು ವ್ಯಕ್ತವಾಗುತ್ತಿವೆ. ರಾಜ್ಯದಲ್ಲೂ ಸ್ವಾಮೀಜಿಗಳು, ಹಿಂದೂ ಪರ ಸಂಘಟನೆಗಳು ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಕೂಡಾ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸನಾತನ ಧರ್ಮ ಡೆಂಘಿ, ಮಲೇರಿಯಾ, ಕೊರೊನಾ ಇದ್ದಂತೆ. ಅದಕ್ಕೆ ಹೆದರಬಾರದು, ಅದನ್ನ ನಿರ್ಮೂಲನೆ ಮಾಡಬೇಕು ಎಂದು ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿದೆ. ಮೈಸೂರಿನಲ್ಲಿ ಮಾತನಾಡಿರುವ ಪೇಜಾವರ ಶ್ರೀಗಳು, ಉದಯನಿಧಿ ಸ್ಟಾಲಿನ್ ಅವರು ತಮಿಳುನಾಡು ರಾಜ್ಯದ ಮಂತ್ರಿ. ಗೌರವಯುತ ಸ್ಥಾನದಲ್ಲಿ ನಿಂತು ಸಮಾಜದಲ್ಲಿ ಇಂತಹ ವಿಷಬೀಜ ಬಿತ್ತುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸನಾತನ ಧರ್ಮವೆಂದರೆ ಬೇರೇನೂ ಅಲ್ಲ. ಸದಾಕಾಲ ಇರುವಂತಹದ್ದು. ಎಲ್ಲರೂ ಸುಖವಾಗಿ ಬಾಳಬೇಕೆಂದು ಹೇಳುವ ಸೂತ್ರವೇ ಈ ಸನಾತನ ಧರ್ಮ ಎಂದು ಅವರು ಹೇಳಿದ್ದಾರೆ.