ಹಿಮಾಚಲದಲ್ಲಿ ಜೋರಾಯ್ತು ವರುಣನ ಆರ್ಭಟ; ಮೇಘಸ್ಫೋಟಕ್ಕೆ ಆರು ಮಂದಿ ನಾಪತ್ತೆ
ಶಿಮ್ಲಾ; ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಮೇಘಸ್ಫೋಟದಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲಲ್ಲಿ ಗುಡ್ಡಗಳು ಕುಸಿದಿವೆ. ಕುಲು ಜಿಲ್ಲೆಯಲ್ಲಿ ಭಾರಿ ಮೇಘಸ್ಫೋಟವಾಗಿದ್ದು, ಹಠಾತ್ ಪ್ರವಾಹದಲ್ಲಿ ಸಲುಕಿ ಕನಿಷ್ಠ ನಾಲ್ಕು ಮಂದಿ ಕೊಚ್ಚಿಹೋಗಿದ್ದಾರೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ.
ಕುಲು ಜಿಲ್ಲೆಯ ಚಲ್ಲಾಲ್ ಪಂಚಾಯತ್‌ನ ಚೋಜ್ ಗ್ರಾಮದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಅವಘಡ ಉಂಟಾಗಿದೆ. ಇದರಲ್ಲಿ ನಾಲ್ಕರಿಂದ ಆರು ಮಂದಿ ನಾಪತ್ತೆಯಾಗಿರಬಹುದು ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಮೊಖ್ತಾ ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ನಾಲ್ವರು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಕುಲು ಪೊಲೀಸ್ ವರಿಷ್ಠಾಧಿಕಾರಿ ಗುರುದೇವ್ ಶರ್ಮಾ ತಿಳಿಸಿದ್ದಾರೆ. ಪಾರ್ವತಿ ನದಿಗೆ ಅಡ್ಡಲಾಗಿರುವ ಸೇತುವೆಗೆ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.