ಸುಪ್ರೀಂಕೋರ್ಟ್ ಸಿಜೆ ರಮಣ ಅಧಿಕಾರ ಅಂತ್ಯ; ನಾಳೆ ಲಲಿತ್ ಅಧಿಕಾರ ಸ್ವೀಕಾರ
ನವದೆಹಲಿ; ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಇಂದು ನಿವೃತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಯು.ಯು.ಲಲಿತ್ ಅವರು 49ನೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ತನ್ನ ಅಧಿಕಾರಾವಧಿಯಲ್ಲಿ ಹಲವು ಹೈಕೋರ್ಟ್‌ಗಳಿಗೆ ಸುಮಾರು 224 ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನಿನ್ನೆ ಹೇಳಿದ್ದರು. ಸುಪ್ರೀಂ ಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಔಪಚಾರಿಕ ಪೀಠದ ಕಲಾಪಗಳನ್ನು ನೇರಪ್ರಸಾರ ಮಾಡಿಸಿದ ಕೀರ್ತಿ ಎನ್.ವಿ. ರಮಣ ಅವರಿಗೆ ಸಲ್ಲುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳಿಗೆ ಶ್ರೀಕಾರ ಹಾಕಿದ್ದಾರೆ. ಮಹಿಳಾ ನ್ಯಾಯಮೂರ್ತಿಗಳ ನೇಮಕ, ಹುದ್ದೆಗಳ ಭರ್ತಿಯಲ್ಲಿ ಸಾಮಾಜಿಕ ಸಮತೋಲನ ಸೇರಿದಂತೆ ಹಲವು ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದರು. ನಾಳೆ ಯು.ಯು.ಲಲಿತ್ ಅವರು 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.