CinemaCrime

ಪಾನೀಯದಲ್ಲಿ ರಾಸಾಯನಿಕ ಬೆರೆಸಿ ಸೋನಾಲಿ ಫೋಗಟ್‌ ಕೊಲೆ..!

ಪಣಜಿ; ಟಿಕ್‌ಟಾಕ್ ಸ್ಟಾರ್‌ ಹಾಗೂ ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರಿಗೆ ಪಾನೀಯದಲ್ಲಿ ರಾಸಾಯನಿಕವನ್ನು ಬೆರೆಸಿ ಕುಡಿಸಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಗೋವಾ ಐಜಿಪಿ ಓಂವೀರ್‌ ಸಿಂಗ್‌ ಬಿಷ್ನೋಯಿ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಸೋನಾಲಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಆರೋಪಿ ಸುಧೀರ್ ಸಂಗ್ವಾನ್ ಮತ್ತು ಅತನ ಸಹವರ್ತಿ ಸುಖ್ವಿಂದರ್ ವಾಸಿ ಕ್ಲಬ್‌ನಲ್ಲಿ ಸೋನಾಲಿ ಫೋಗಟ್‌ ಅವರೊಂದಿಗೆ ಪಾರ್ಟಿ ಮಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಗೊತ್ತಾಗಿತ್ತು. ಇಬ್ಬರಲ್ಲಿ ಒಬ್ಬಾತ ಫೋಗಟ್‌ ಅವರಿಗೆ ಬಲವಂತವಾಗಿ ದ್ರವವೊಂದನ್ನು ಕುಡಿಸಿರುವುದು ಕೂಡಾ ವಿಡಿಯೊದಲ್ಲಿ ದಾಖಲಾಗಿದೆ ಎಂದು ಐಜಿಪಿ ಓಂವೀರ್‌ ತಿಳಿಸಿದ್ದಾರೆ. ಈ ಬಗ್ಗೆ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಸೊನಾಲಿ ಫೋಗಟ್‌ ಅವರಿಗೆ ಉದ್ದೇಶಪೂರ್ವಕವಾಗಿ ರಾಸಾಯನಿಕವೊಂದನ್ನು ಪಾನೀಯದಲ್ಲಿ ಬೆರೆಸಿ ಕುಡಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ನಾಯಕಿ, ನಟಿ ಸೊನಾಲಿ ಫೋಗಟ್‌ (42) ಸೋಮವಾರ ರಾತ್ರಿ ಗೋವಾದಲ್ಲಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರು ಸಾವಿಗೀಡಾಗಿರುವುದಾಗಿ ಮೊದಲಿಗೆ ಹೇಳಲಾಗಿತ್ತು. ಅದರೆ, ಅವರ ಮರಣೋತ್ತರ ಪರೀಕ್ಷೆ ವರದಿ ಗುರುವಾರ ಬಹಿರಂಗವಾಗಿದ್ದು, ಅವರ ದೇಹದ ಮೇಲೆ ಗಾಯಗಳಾಗಿರುವುದು ತಿಳಿದುಬಂದಿತ್ತು. ಹೀಗಾಗಿ ನಟಿ ಕೊಲೆಯಾಗಿರುವುದು ಖಚಿತವಾಗಿತ್ತು.

Share Post