ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಸಿ.ಆರ್.ಮನೋಹರ್
ಬೆಂಗಳೂರು: ವಿಧಾನಪರಿಷತ್ ಚುನಾವಣೆಯ ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಜೋರಾಗಿ ನಡೆಯುತ್ತಿದೆ. ಮುಖಂಡರ ಪಕ್ಷಾಂತರ ಪರ್ವ ಮುಂದುವರೆದಿದೆ. ಇಂದು ಜೆಡಿಎಸ್‌ನ ಸಿ.ಆರ್.ಮನೋಹರ್ ಹಾಗೂ ಮಾಜಿ ಶಾಸಕ ಎ.ನಾಗರಾಜು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಿ.ಆರ್. ಮನೋಹರ್ ಹಾಗೂ ಎ.ನಾಗರಾಜು ಕಾಂಗ್ರೆಸ್ ಸೇರಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಜಾತ್ರೆ ಆರಂಭವಾಗಿದೆ. ಆನೇಕರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಸಿ.ಆರ್.ಮನೋಹರ್, ಮಾಜಿ ಶಾಸಕ ನಾಗರಾಜ್ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.