ಬಿಜೆಪಿ-ಜೆಡಿಯು ಮೈತ್ರಿಗೆ ವಿಘ್ನ; ಕೆಲವೇ ಕ್ಷಣಗಳಲ್ಲಿ ನಿತೀಶ್ ರಾಜ್ಯಪಾಲರ ಭೇಟಿ
ಪಾಟ್ನಾ; ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಮುರಿದುಬೀಳುವ ಹಂತ ತಲುಪಿದೆ. ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿಯಾಗಲಿದ್ದಾರೆ.
ನಿತೀಶ್ ಕುಮಾರ್ ಅವರು 1 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದರು. ಆದ್ರೆ, 1.30ರ ವೇಳೆಗೆ ಬಿಜೆಪಿಯ 16 ಸಚಿವರು ರಾಜ್ಯಪಾಲರ ಭೇಟಿಗೆ ಅವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲರ ಭೇಟಿ ಮಾಡಲಿದ್ದಾರೆ. ಇದಕ್ಕೂ ಮುನ್ನ ಜೆಡಿಯು ವರಿಷ್ಠ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮನೆಯಲ್ಲಿ ಸೇರಿದ್ದ ಶಾಸಕರು ಮತ್ತು ಸಂಸದರ ಸಭೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಬಹುತೇಕರು, ಬಿಜೆಪಿಯೊಂದಿಗಿನ ಮೈತ್ರಿ ಮುಂದುವರಿಸುವುದು ಬೇಡವೆಂದು ಅಭಿಪ್ರಾಯಪಟ್ಟಿರುವುದಾಗಿ ತಿಳಿದುಬಂದಿದೆ. ಇತ್ತ, ಆರ್‌ಜೆಡಿ ಶಾಸಕರ ಸಭೆಯು ಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ಅವರ ತಾಯಿ ರಾಬ್ರಿ ದೇವಿ ನೇತೃತ್ವದಲ್ಲಿ ಸರ್ಕ್ಯುಲರ್ ರಸ್ತೆಯ ಬಂಗಲೆಯಲ್ಲಿ ನಡೆದಿದೆ.