National

ಅಧಿಕಾರಿಗಳು ಲಂಚ ಕೇಳಿದ್ರೆ ಅದನ್ನು ವಿಡಿಯೋ ಮಾಡಿ ಕಳುಹಿಸಿ-ಪಂಜಾಬ್‌ ಸಿಎಂ ಸೂಚನೆ

ಪಂಜಾಬ್: ಆಪ್ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಲಿದೆ. ಈ ನಿಟ್ಟಿನಲ್ಲಿ ಮಾ.23ರಂದು ಸಹಾಯವಾಣಿ ಆರಂಭಿಸಲಾಗುವುದು ಎಂದು ಪ್ರಮಾಣ ವಚನ ಸ್ವೀಕಾರದ ಮರುದಿನವೇ ಸಿಎಂ ಭಗವಂತ್ ಮಾನ್ ಟ್ವಿಟರ್ ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

“ಭಗತ್ ಸಿಂಗ್ ನಿಧನರಾದ ಮಾರ್ಚ್ 23 ರಂದು ನಾವು ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸುತ್ತೇವೆ. ಇದು ನನ್ನ ವೈಯಕ್ತಿಕ ವಾಟ್ಸಾಪ್ ಸಂಖ್ಯೆ ಕೂಡ” ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

‘ನಿಮ್ಮಿಂದ ಯಾರಾದರೂ ಲಂಚ ಕೇಳಿದ್ರೆ ಅಥವಾ ತೆಗೆದುಕೊಳ್ಳುವುದನ್ನು ನೀವು ನೋಡಿದರೆ.. ಅದನ್ನು ಆಡಿಯೋ ಅಥವಾ ವಿಡಿಯೋ ರೂಪದಲ್ಲಿ ರೆಕಾರ್ಡ್ ಮಾಡಿ ಆ ಕ್ಲಿಪ್ ಅನ್ನು ನನಗೆ ಕಳುಹಿಸಿ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಬಹಿರಂಗ ಸೂಚನೆ ನೀಡಿದ್ದಾರೆ.

ಜನ ನನ್ನನ್ನು ಆಯ್ಕೆ ಮಾಡಿರುವ ಉದ್ದೇಶದಂತೆ ಅವರು  ಬಯಸಿದ ಬದಲಾವಣೆಯನ್ನು ಖಂಡಿತವಾಗಿಯೂ ತರುತ್ತೇನೆ ಎಂದು ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ದಿನ ಹೇಳಿದರು. ನಮ್ಮ ಸರ್ಕಾರ ಪಂಜಾಬ್‌ನಲ್ಲಿ ಅತ್ಯಂತ ಪ್ರಾಮಾಣಿಕ ಸರ್ಕಾರ ಎಂದು ಹೆಸರು ಮಾಡುತ್ತೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ರು.

ವ್ಯವಸ್ಥೆಯಲ್ಲಿ 99 ಪ್ರತಿಶತ ಜನರು ಪ್ರಾಮಾಣಿಕರಾಗಿದ್ದಾರೆ. ಉಳಿದ 1 ರಷ್ಟು ಜನರಿಂದ ವ್ಯವಸ್ಥೆಯು ಹಾಳಾಗುತ್ತಿದೆ. ಪ್ರಾಮಾಣಿಕ ಅಧಿಕಾರಿಗಳ ಜೊತೆ ನಾನು ಸದಾ ಇರುತ್ತೇನೆ. ಇನ್ನು ಮುಂದೆ ಪಂಜಾಬ್‌ನಲ್ಲಿ ಶೋಷಣೆ ಇರುವುದಿಲ್ಲ. ಹಪ್ತಾ ವಸೂಲಿಯಿಂದ ಯಾವುದೇ ಸಚಿವರಿಂದ ತೊಂದರೆಯಾಗುವುದಿಲ್ಲ ಎಂದು ಪಂಜಾಬ್ ಸಿಎಂ ಭರವಸೆ ನೀಡಿದ್ದಾರೆ.

Share Post