NationalPolitics

ಪ್ರತಿಪಕ್ಷಗಳ ಸಭೆಗೆ ಮೋದಿ ಗೈರು; ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

ನವದೆಹಲಿ: ನಾಳೆಯಿಂದ ಸಂಸತ್‌ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಆದ್ರೆ ಈ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾಗಿದ್ದು, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ಸಭೆಗೆ ಹಾಜರಾಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ನಡೆದ ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಹಾಜರಾಗಿರಲಿಲ್ಲ. ಬದಲಾಗಿ, ಸರ್ಕಾರದ ಪರವಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌ ಹಾಜರಿದ್ದರು. ಆದರೆ ಈ ಸಭೆಯಲ್ಲಿ ಪ್ರಧಾನಿ ಹಾಜರಿರಬೇಕಿತ್ತು ಎಂದು ಪ್ರತಿಪಕ್ಷಗಳು ವಾದಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಗೆ ಹಾಜರಾಗಲಿದ್ದಾರೆ ಮತ್ತು ಕೆಲವು ಸಂಗತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಿದ್ದೆವು. ಕೆಲವು ಕಾರಣಗಳಿಂದ ಅವರು ಸಭೆಗೆ ಹಾಜರಾಗಿಲ್ಲ. ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ಆದರೆ ರೈತರಿಗೆ ಅದನ್ನು ಅರ್ಥ ಮಾಡಿಸಲು ತಮ್ಮಿಂದ ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಹೇಳಿದ್ದರು. ಕೃಷಿ ಕಾಯ್ದೆಗಳ ಕುರಿತು ನಾವು ಮತ್ತಷ್ಟು ಮಾಹಿತಿ ಪಡೆಯಲು ಬಯಸಿದ್ದೆವು. ಬೇರೆ ಸ್ವರೂಪದಲ್ಲಿ ಈ ಮೂರೂ ಕಾಯ್ದೆಗಳು ಮರಳಿ ಬರಲಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇನ್ನಷ್ಟು ವಿವರ ತಿಳಿಯಲು ಬಯಸಿದ್ದೆವು. ಆದರೆ ಪ್ರಧಾನಿಯೇ ಸಭೆಗೆ ಬರಲಿಲ್ಲ ಎಂದು ರಾಜ್ಯಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಹಣದುಬ್ಬರ, ಇಂಧನ ಬೆಲೆ ಏರಿಕೆ, ರೈತರ ಆತಂಕಗಳು, ಗಡಿಯಲ್ಲಿ ಚೀನಾದ ಅತಿಕ್ರಮಣ ಮತ್ತು ಕೋವಿಡ್ 19 ಸೇರಿದಂತೆ ವಿವಿಧ ಸಂಗತಿಗಳ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಪಡಿಸುವ ಕಾಯ್ದೆ ಜಾರಿಗೂ ಪ್ರತಿಪಕ್ಷಗಳು ಒತ್ತಾಯಿಸಿದವು. ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಗಳ ಪ್ರತಿ ಕುಟುಂಬಕ್ಕೂ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಇರಿಸಿದ್ದೇವೆ. ಅಲ್ಲದೆ, ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಜೀವ ಕಳೆದುಕೊಂಡ ರೈತರ ಕುಟುಂಬದವರಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಹೇಳಿದ್ದಾರೆ.

Share Post