ಆರ್ಟಿಕಲ್ 370 ರದ್ದು ಕೇಸ್; ಕೇಂದ್ರದ ಕ್ರಮ ಸರಿ ಎಂದ ಸುಪ್ರೀಂ ಕೋರ್ಟ್
ನವದೆಹಲಿ; ಆರ್ಟಿಕಲ್ 370 ರದ್ದು ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 2019ರ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿತ್ತು. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆದ್ರೆ, ವಾದ-ಪ್ರತಿವಾದ ಆಲಿಸಿರುವ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಕೇಂದ್ರ ಸರ್ಕಾರದ ಕ್ರಮ ಸಂವಿಧಾನಬದ್ಧವಾಗಿದ್ದು, ಆರ್ಟಿಕಲ್ 370 ರದ್ದು ಮಾಡಿದ್ದು ಸರಿ ಇದೆ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಕೇಂದ್ರದ ಕ್ರಮವನ್ನು ಎತ್ತಿಹಿಡಿದಿದೆ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಮಹತ್ವದ ಗೆಲುವು ಸಿಕ್ಕಂತಾಗಿದೆ.
ಆರ್ಟಿಕಲ್ 370 ರದ್ದತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಒಟ್ಟು 22 ಅರ್ಜಿಗಳು ಸಲ್ಲಿಕೆ ಆಗಿದ್ದವು. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ಇವುಗಳ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಈ ಪೀಠದಲ್ಲಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಇದ್ದರು.
ಈ ಪ್ರಕರಣದ ಸಂಬಂಧ ಒಟ್ಟು ಮೂರು ತೀರ್ಪುಗಳನ್ನು ನೀಡಲಾಗಿದೆ. ಸಿಜೆಐ ಒಂದು ತೀರ್ಪು ಬರೆದಿದ್ದಾರೆ. ಇನ್ನೊಂದನ್ನು ಜಸ್ಟೀಸ್ಗಳಾದ ಗವಾಯಿ, ಸೂರ್ಯ ಕಾಂತ್, ಖನ್ನಾ ಅವರು ಬರೆದಿದ್ದಾರೆ. ಮೂರನೆಯದನ್ನುನ್ಯಾಯಮೂರ್ತಿ ಕೌಲ್ ಅವರು ಪ್ರತ್ಯೇಕ ತೀರ್ಪು ಬರೆದಿದ್ದಾರೆ
ತುರ್ತು ಪರಿಸ್ಥಿತಿ ಹೇರಿಕೆ ಇರುವಾಗ ಮಾತ್ರ ರಾಷ್ಟ್ರಪತಿ ಮತ್ತು ಗವರ್ನರ್ಗೆ ಸೀಮಿತ ಅಧಿಕಾರ ಇರುತ್ತದೆ. ರಾಷ್ಟ್ರಪತಿಗಳ ಅಧಿಕಾರ ನ್ಯಾಯಾಂಗದ ಪರಾಮರ್ಶೆಗೆ ಒಳಪಟ್ಟಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಆಡಳಿತವನ್ನು ತನ್ನದೆಂದು ಭಾವಿಸುವುದು ಸರಿಯಲ್ಲ ಎಂದು ಮುಖ್ಯನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಕೋರ್ಟ್ ಕೇಳಿದ ಐದು ಪ್ರಶ್ನೆಗಳು:
- ಸಂವಿಧಾನದಲ್ಲಿ ಆರ್ಟಿಕಲ್ 370 ಶಾಶ್ವತ ನಿಬಂಧನೆ ಆಗಿದೆಯೇ?
- 370ನೇ ವಿಧಿಯು ಶಾಶ್ವತ ನಿಬಂಧನೆಯಾಗಿ ಮಾರ್ಪಟ್ಟರೆ ಅದನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದೆಯೇ?
- ರಾಜ್ಯ ವಿಧಾನಸಭೆಯ ಒಂದು ಪ್ರಮುಖ ಅಂಶದ ಮೇಲೆ ಶಾಸನವನ್ನು ಜಾರಿಗೊಳಿಸಲು ಸಂಸತ್ತಿಗೆ ನಿರ್ಬಂಧವಿದೆಯೇ?
- ಕೇಂದ್ರಾಡಳಿತ ಪ್ರದೇಶವು ಎಷ್ಟು ಕಾಲ ಅಸ್ತಿತ್ವದಲ್ಲಿರಬಹುದು?
- ಸಂವಿಧಾನ ಸಭೆಯ ಅನುಪಸ್ಥಿತಿಯಲ್ಲಿ ಆರ್ಟಿಕಲ್ 370 ರದ್ದತಿಯನ್ನು ಯಾರು ಶಿಫಾರಸು ಮಾಡಬಹುದು?