ಕೈಗಳಿಲ್ಲದಿದ್ದರೂ ಕಾಲಲ್ಲಿ ಕಾರು ಓಡಿಸಿ ಪರವಾನಗಿ ಪಡೆದ ಯುವತಿ!
ಇಡುಕ್ಕಿ; ಆಕೆಗೆ ಹುಟ್ಟಿನಿಂದಲೇ ವಿಕಲಚೇತನೆ. ಎರಡೂ ಕೈಗಳಿಲ್ಲ. ಆದರೂ ಕಾಲಿನಲ್ಲೇ ಎಲ್ಲಾ ಕೆಲಸ ಮಾಡುತ್ತಾಳೆ. ಕಾರನ್ನು ಕೂಡಾ ಓಡಿಸುತ್ತಾಳೆ. ಇದೀಗ ಆಕೆ ಕಾರು ಚಾಲನೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಚಾಲನಾ ಪರವಾನಗಿಯನ್ನು ಪಡೆದುಕೊಂಡಿದ್ದಾಳೆ. ಕೇರಳದ ಈ ಯುವತಿಯ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೇರಳದ ಇಡುಕ್ಕಿಯ ಜಿಲುಮೋಳ್ ಮೇರಿಯೆಟ್ ಥಾಮಸ್ ಎಂಬಾಕೆ ಈ ಸಾಧನೆ ಮಾಡಿದವರು. ಚಿಕ್ಕವರಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡ ಇವರು, ಎರಡೂ ಕೈಗಳಿಲ್ಲದಿದ್ದರೂ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.
ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಏಷ್ಯಾದ ಎರಡನೇ ವ್ಯಕ್ತಿ ಎಂಬ ಕೀರ್ತಿ ಇವರದ್ದು. ಇವರ ಸಾಧನೆಯನ್ನು ಮೆಚ್ಚಿ ಆನಂದ್ ಮಹಿಂದ್ರ ಅವರು ಕೂಡಾ ಟ್ವೀಟ್ ಮಾಡಿದ್ದಾರೆ. ಗ್ರಾಫಿಕ್ ಡಿಸೈನರ್, ಚಿತ್ರ ಕಲಾವಿದೆಯೂ ಆಗಿರುವ ಇವರು 27ಸಾವಿರಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಯೂಟ್ಯೂಬರ್ ಕೂಡಾ ಆಗಿದ್ದಾರೆ.