BengaluruCrime

ಕಾರು, ಬಸ್‌ಗೆ ಬೆಂಕಿ; ಜನ ವಿಡಿಯೋ ಮಾಡುತ್ತಾ ನಿಂತಿದ್ದರು!

ಬೆಂಗಳೂರು; ನಿಂತಿದ್ದ ಬಿಎಂಟಿಸಿ ಬಸ್‌ಗೆ ಕಾರೊಂದು ಡಿಕ್ಕಿ ಹೊಡೆದು ಅವಾಂತರ ಸೃಷ್ಟಿಸಿದೆ. ನಾಯಂಡಳ್ಳಿ ಬಳಿಯ ರಿಂಗ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದು ಬಸ್‌ಗೂ ವ್ಯಾಪ್ತಿಸಿದೆ. ಬಸ್‌ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬಸ್‌ ಸಂಪೂರ್ಣ ಸುಟ್ಟು ಕರಕಲಾಗುವುದನ್ನು ತಡೆಯಲಾಗಿದೆ.

ವೇಗವಾಗಿ ಬಂದ ಐ೨೦ ಕಾರು ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕೂಡಲೇ ಕಾರಿನಲ್ಲಿದ್ದವರು ಕೆಳಗಿಳಿದಿದ್ದಾರೆ. ಅಷ್ಟರಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದಿದೆ. ಕಾರು ಬಸ್‌ನ ಹಿಂಬದಿ ಸಿಕ್ಕಿಕೊಂಡಿದ್ದರಿಂದ ಬಸ್‌ನ ಹಿಂಭಾಗಕ್ಕೂ ಬೆಂಕಿ ಹರಡಿತ್ತು. ಭಯಬಿದ್ದು ಹಾಗೆಯೇ ಬಿಟ್ಟಿದ್ದರೆ ಎರಡೂ ವಾಹನಗಳು ಭಸ್ಮವಾಗುತ್ತಿದ್ದವು. ಆದ್ರೆ ಬಿಎಂಟಿಸಿ ಬಸ್‌ ಚಾಲಕ ಹಾಗೂ ನಿರ್ವಾಹಕ, ಸಂಪೂರ್ಣ ಸುಟ್ಟುಹೋಗವುದರಿಂದ ಬಸ್ಸನ್ನು ಕಾಪಾಡಿದ್ದಾರೆ.

ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಸಂಚರಿಸುವ ಬನಶಂಕರಿ ಡಿಪೋನ 26ರ ಮಾರ್ಗದ 401NY ಬಸ್​ ಸಂಖ್ಯೆ F4968ರ ಬಸ್ ಇದಾಗಿದೆ. ಘಟನೆ ನಡೆಯುತ್ತಿದ್ದಂತೆ ಚಾಲಕ ಗೌರೀಶ್​ ಬಿ, ನಿರ್ವಾಹಕ ಗಿರಿಧರ್​​ ಇಬ್ಬರೂ ಬಸ್ಸನ್ನು ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಬೇರ್ಪಡಿಸಲು ಹರಸಾಹಸ ಮಾಡಿದ್ದಾರೆ. ಬಸ್ಸನ್ನು ಡಿವೈಡರ್‌ ಮೇಲೆ ಹತ್ತಿಸಿದ್ದರಿಂದ ಸಿಕ್ಕಿಕೊಂಡಿದ್ದ ಕಾರು ಬೇರ್ಪಟ್ಟಿದೆ. ಅನಂತರ ಬಸ್‌ನ ಹಿಂದೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.

ಇದನ್ನು ನೋಡಿ ಸಹಾಯಕ್ಕೆ ಬರಬೇಕಿದ್ದ ಸಾರ್ವಜನಿಕರು ಸುಮ್ಮನೆ ನೋಡಿಕೊಂಡು ನಿಂತಿದ್ದರು. ಎಲ್ಲರೂ ವಿಡಿಯೋ ಮಾಡಿಕೊಳ್ಳುವುದರಲ್ಲಿ ನಿರತರಾಗಿದ್ದರು ಅಂತ ಚಾಲಕ ಗೌರೀಶ್‌ ಆರೋಪ ಮಾಡಿದ್ದಾರೆ. ಬಸ್‌ ಹಾಗೂ ಕಾರಿನಲ್ಲಿದ್ದ ಎಲ್ಲರೂ ಸೇಫಾಗಿದ್ದಾರೆ ಎಂದು ತಿಳಿದುಬಂದಿದೆ.

 

Share Post