National

ಜೋಧ್‌ಪುರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ

ಜೋಧಪುರ್; ರಾಜಸ್ಥಾನದ ಜೋಧಪುರ್​ನಲ್ಲಿ ಧ್ವಜದ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಎಲ್ಲಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಜೊತೆಗೆ ಜೋಧ್‌ಪುರ್‌ನಲ್ಲಿ ಇಂಟರ್‌ನೆಟ್​ ಸೇವೆಯನ್ನು ಕೂಡಾ ಸ್ಥಗಿತ ಮಾಡಲಾಗಿದೆ. ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಕೂಡಾ ಜನರಲ್ಲಿ ಮನವಿ ಮಾಡಿದ್ದಾರೆ.

ಜೋಧ್‌ಪುರದ ಜಲೋರಿ ಗೇಟ್​ ಬಳಿ ನಿನ್ನೆ ಧ್ವಜ ಹಾರಿಸಲು ಕೆಲವರು ಯತ್ನಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಧ್ವಜ ಹಾರಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಲು ಪ್ರಯತ್ನಿಸಿದ್ದಾನೆ. ಇದನ್ನು ನೋಡಿದ ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗೆ ಶುರುವಾದ ಜಗಳ ಎರಡು ಗುಂಪುಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ.

ರಾಜಸ್ಥಾನ ಸಶಸ್ತ್ರ ಪಡೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡು ಗಂಪುಗಳನ್ನು ಚದುರಿಸಿದ್ದಾರೆ. ಆದರೆ, ತಡರಾತ್ರಿ ಮತ್ತೆ ಎರಡೂ ಗಂಪುಗಳು ಮರಳಿ ಬಂದು ವಾಗ್ವಾದ ನಡೆಸಿವೆ. ಹೀಗಾಗಿ ಜಲೋರಿ ಗೇಟ್ ಹಾಗೂ ಈದ್ಗಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರ ನಡುವೆ ರಾತ್ರಿ ಕಲ್ಲು ತೂರಾಟ ನಡೆದಿದೆ.

Share Post