ಅಯೋಧ್ಯೆಗೆ 1 ಲಕ್ಷ ಲಡ್ಡು ಕಳುಹಿಸಿದ ಟಿಟಿಡಿ
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕಾಗಿ ಒಂದು ಲಕ್ಷ ಲಡ್ಡೂಗಳನ್ನು ಸಿದ್ಧಪಡಿಸಿ ಕಳುಹಿಸಿದೆ.
ಅಯೋಧ್ಯೆಯಲ್ಲಿ ಇದೇ ತಿಂಗಳ 22 ರಂದು ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ, ಈ ಕಾರ್ಯಕ್ರಮಕ್ಕೆ ದೇಶದ ಹಲವೆಡೆಗಳಿಂದ ದೊಡ್ಡ ಪ್ರಮಾಣದ ಉಡುಗೊರೆಗಳು ಮತ್ತು ಪ್ರಸಾದಗಳು ಬರುತ್ತಿವೆ.
ದೇವಾಲಯದ ಉದ್ಘಾಟನೆ ಸಂದರ್ಭದಲ್ಲಿ ಭಕ್ತರಿಗೆ ಶ್ರೀವಾರಿ ಲಡ್ಡು ಪ್ರಸಾದವನ್ನು ಕಳುಹಿಸಲಾಗುತ್ತಿದೆ ಎಂದು ಟಿಟಿಡಿ ಹೆಚ್ಚುವರಿ ಇಒ(ಎಫ್ಎಸಿ) ವೀರಬ್ರಹ್ಮ ತಿಳಿಸಿದ್ದಾರೆ.
ತಿರುಮಲದಲ್ಲಿರುವ ಶ್ರೀವಾರಿ ಸೇವಾ ಸದನ-1ರಿಂದ ಶ್ರೀವಾರಿ ಲಡ್ಡು ಪ್ರಸಾದವಿರುವ ಬಾಕ್ಸ್ಗಳನ್ನು ಶುಕ್ರವಾರ ರಾತ್ರಿ ತಿರುಪತಿ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಯಿತು.
ಗುರುವಾರ ಶ್ರೀವಾರಿಯ ಸೇವಕರೊಂದಿಗೆ 350 ಬಾಕ್ಸ್ಗಳಲ್ಲಿ ಒಂದು ಲಕ್ಷ ಲಡ್ಡೂಗಳನ್ನು ಪ್ಯಾಕ್ ಮಾಡಿದ್ದೇವೆ ಎಂದು ಹೇಳಿದರು. ತಿರುಪತಿ ವಿಮಾನ ನಿಲ್ದಾಣದಿಂದ ವಿಶೇಷ ಕಾರ್ಗೋ ವಿಮಾನದ ಮೂಲಕ ಈ ಲಡ್ಡೂಗಳನ್ನು ಅಯೋಧ್ಯೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ಈ ಲಡ್ಡೂಪ್ರಸಾದವನ್ನು ಶನಿವಾರ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಮತ್ತೊಂದೆಡೆ, ಕೇಟರಿಂಗ್ ಸೇವಾ ಕಂಪನಿಯೊಂದು ಹೈದರಾಬಾದ್ನಿಂದ 1265 ಕೆಜಿ ಲಡ್ಡು ಪ್ರಸಾದವನ್ನು ಅಯೋಧ್ಯೆಗೆ ಕಳುಹಿಸಿದೆ.