HistoryLifestylePolitics

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲೇ ನಡೆದಿತ್ತು ಮದುವೆ ರಿಸೆಪ್ಷನ್‌!

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಸಭೆ ಸಮಾರಂಭಗಳು ನಡೆಯುತ್ತವೆ. ಪ್ರಶಸ್ತಿ ವಿತರಣೆ, ಒಮ್ಮೊಮ್ಮೆ ಸಚಿವರ ಪ್ರಮಾಣವಚನ ಕಾರ್ಯಕ್ರಮಗಳು ಜರುಗುವುದೂ ಉಂಟು. ಸರ್ಕಾರಕ್ಕೆ ಸಂಬಂಧಿಸಿದ ಔತಣಕೂಟಗಳಿಗೂ ಬ್ಯಾಂಕ್ವೆಟ್‌ ಹಾಲ್‌ ಸಾಕ್ಷಿಯಾಗುತ್ತದೆ. ಆದರೆ, ಇದೇ ಬ್ಯಾಂಕ್ವೆಟ್‌ ಹಾಲ್‌ ಒಂದೊಮ್ಮೆ ಮದುವೆ ಮಂಟಪವಾಗಿ ಮಾರ್ಪಟ್ಟಿತ್ತು. ಒಂದೇ ಒಂದು ಬಾರಿ ಇಲ್ಲಿ ಮದುವೆ ಆರತಕ್ಷತೆ ನಡೆದಿತ್ತು. ಈ ಮದುವೆ ಆರತಕ್ಷತೆಗೆ ಅಂದಿನ ಇಡೀ ಸರ್ಕಾರ ಹಾಗೂ ಅಧಿಕಾರಿ ವರ್ಗ ಸಾಕ್ಷಿಯಾಗಿತ್ತು. ಅಚ್ಚರಿ ಎನಿಸಿದರೂ ಇದು ಸತ್ಯ.
ಈ ಆರತಕ್ಷತೆ ಸಮಾರಂಭ ನಡೆದದ್ದು ೧೯೬೪ ಮಾರ್ಚ್‌ ೯ರಂದು. ಅಂದು ಶಾಸಕರಾಗಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಹಾಗೂ ಸೋನಕ್ಕರ ಮದುವೆ ಆರತಕ್ಷತೆ ಅದು. ಅಂದಿನ ಸರ್ಕಾರದ ಒಪ್ಪಿಗೆಯಿಂದಲೇ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶಾಂತವೇರಿ ಗೋಪಾಲಗೌಡ ಹಾಗೂ ಸೋನಕ್ಕರ ಮದುವೆ ಆರತಕ್ಷತೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಗಣ್ಯರೆಲ್ಲರೂ ಹಾಜರಿದ್ದರಂತೆ. ಅದರಲ್ಲೂ ಅವರ ವಿವಾಹಕ್ಕೆ ಕಾರಣೀಭೂತರಾಗಿದ್ದ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಹಾಗೂ ದೇವರಾಜ ಅರಸು, ಅಂದಿನ ವಿಧಾನಸಭಾ ಸ್ಪೀಕರ್ ವೈಕುಂಠ ಬಾಳಿಗ‌ ಸೇರಿದಂತೆ ನಾಡಿನ ಗಣ್ಯರೆಲ್ಲಾ ಉಪಸ್ಥಿತರಿದ್ದು, ನವಜೋಡಿಗೆ ಶುಭ ಕೋರಿದ್ದರು. ಅಂದಹಾಗೆ ಸೋನಕ್ಕರ ತಂದೆ ಧಾರವಾಡದಲ್ಲಿ ಖ್ಯಾತ ವಕೀಲರಾಗಿದ್ದ ಡಿ.ಎಸ್‌.ಪಾಟೀಲರ ಒತ್ತಡದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಆರತಕ್ಷತೆ ನಡೆಸಲಾಗಿತ್ತು ಎಂದು ಹೇಳಲಾಗುತ್ತದೆ.
ಗೋಪಾಲಗೌಡರಿಗೆ ಮಾತ್ರ ಈ ಅದೃಷ್ಟ..!
ವಿಧಾನಸೌಧದ ಇತಿಹಾಸದಲ್ಲಿ ಖಾಸಗಿ ಕಾರ್ಯಕ್ರಮ, ಅದರಲ್ಲೂ ಮದುವೆ ರಿಸೆಪ್ಷನ್‌ ಅಂತ ನಡೆದಿದ್ದು ಇದೊಂದೇ. ಮತ್ತೆ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಯಾವ ಖಾಸಗಿ ಕಾರ್ಯಕ್ರಮವೂ ನಡೆಯಲಿಲ್ಲ. ಇನ್ಮುಂದೆ ನಡೆಯುವುದೂ ಇಲ್ಲ. ಯಾಕಂದ್ರೆ, ಗೋಪಾಲಗೌಡರ ಆರತಕ್ಷತೆ ನಂತರ ವಿಧಾನಸೌಧದ ನಿಯಮಾವಳಿಗಳು ಬದಲಾಗಿವೆ. ಈ ನಿಯಮಾವಳಿಗಳ ಪ್ರಕಾರ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮಾತ್ರ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅವಕಾಶವಿದೆ. ಇಲ್ಲೀಗ ಸರ್ಕಾರದ ಸಭೆ, ಸಮಾರಂಭಗಳು, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಸರ್ಕಾರಕ್ಕೆ ಸಂಬಂಧಿಸಿದ ಔತಣಕೂಟಗಳು, ಪ್ರಮಾಣವಚನ ಸ್ವೀಕಾರ ಸಮಾರಂಭಗಳು ನಡೆಯುತ್ತವೆ. ಇದಕ್ಕೆ ಮಾತ್ರ ಬ್ಯಾಂಕ್ವೆಟ್‌ ಹಾಲ್‌ ಮೀಸಲಿದೆ.
ಶಾಸಕರ ಭವನದಲ್ಲೇ ಹೆರಿಗೆ, ಅಲ್ಲೇ ನಾಮಕರಣ..!
ಸಮಾಜವಾದಿ ಹಿನ್ನೆಲೆಯಿಂದ ಬಂದ ಶಾಂತವೇರಿ ಗೋಪಾಲಗೌಡರು ಸರಳ ಜೀವನ ನಡೆಸುತ್ತಿದ್ದರು. ಅವರಿಗೆ ಇರೋಕೆ ಸ್ವಂತದ್ದೊಂದು ಮನೆಯೂ ಇರಲಿಲ್ಲ. ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಒಂದು ಸೈಟ್‌ ಅಲಾಟ್‌ ಮಾಡಿಕೊಟ್ಟರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು. ಅದರ ಬದಲಾಗಿ ನವಜೋಡಿ ಶಾಸಕರ ಭವನದಲ್ಲೇ ಸಂಸಾರ ಹೂಡಿತ್ತು. ೧೯೬೪ರಿಂದ ೬೭ರವರೆಗೂ ಶಾಂತವೇರಿ ಗೋಪಾಲಗೌಡರು ಶಾಸಕರ ಭವನದ ೨೨೭ನೇ ನಂಬರಿನ ಕೊಠಡಿಯಲ್ಲಿ ವಾಸವಿದ್ದರು. ಇದೇ ಕೋಣೆಯಲ್ಲಿ ಸೋನಕ್ಕೆ ಹೆಣ್ಣು ಮಗುವಿಗೆ ಜನ್ಮವಿತ್ತರು. ಅದೇ ಶಾಸಕರ ಭವನದ ಕೊಠಡಿಯಲ್ಲಿ ಆ ಹೆಣ್ಣುಮಗುವಿಗೆ ʻಇಳಾಗೀತಾʼ ಎಂದು ನಾಮಕರಣವನ್ನೂ ಮಾಡಿದರು. ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ, ಕೋಣಂದೂರು ಲಿಂಗಪ್ಪ ಹಾಗೂ ಶಾಂತವೇರಿ ಗೋಪಾಲ ಗೌಡ ಈ ಮೂವರೂ ಸೇರಿ ಇಳಾಗೀತಾ ಎಂಬ ಹೆಸರನ್ನು ಫೈನಲ್‌ ಮಾಡಿದ್ದರು.
ಶಾಂತವೇರಿ ಗೋಪಾಲಗೌಡರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಾಲ್ಕೈದು ವರ್ಷಗಳ ಕಾಲ ಶಾಸಕರ ಭವನದ ೨೨೭ನೇ ಕೊಠಡಿಯಲ್ಲಿ ಸಂಸಾರ ನಡೆಸಿದ್ದರು. ಅನಂತರ ಕೆಲ ವರ್ಷ ೨೭ನೇ ನಂಬರಿನ ಕೊಠಡಿಯಲ್ಲಿ ಸಂಸಾರ ಶುರು ಮಾಡಿದ್ದರು. ಆದರೆ, ಅವರ ಗೆಳೆಯರಿಗೆ ಶಾಂತವೇರಿ ಗೋಪಾಲಗೌಡರು ಶಾಸಕರ ಭವನದಲ್ಲೇ ಕುಟುಂಬ ಸಮೇತ ಕಳೆಯುವುದು ಇಷ್ಟವಿರಲಿಲ್ಲ. ಹೀಗಾಗಿ ಗೆಳೆಯ ಕೋಣಂದೂರು ಲಿಂಗಪ್ಪ ಸೇರಿ ಹಲವು ಗೆಳೆಯರು ಪುಟ್ಟದೊಂದು ಬಾಡಿಗೆ ಮನೆಯನ್ನು ಹುಡುಕಿಕೊಟ್ಟರು. ಗೆಳೆಯ ಬಲವಂತಕ್ಕೆ ಕಟ್ಟುಬಿದ್ದ ಶಾಂತವೇರಿ ಗೋಪಾಲಗೌಡರು ಸಂಸಾರವನ್ನು ಬಾಡಿಗೆ ಮನೆಗೆ ಶಿಫ್ಟ್‌ ಮಾಡಿದರು. ೧೯೭೧ರಲ್ಲಿ ಶಾಂತವೇರಿ ಗೋಪಾಲಗೌಡರು ಅನಾರೋಗ್ಯದ ಕಾರಣದಿಂದ ನಿಧನರಾದರು. ಮೂರು ಬಾರಿ ಶಾಸಕರಾದರೂ ಅವರು ಕೊನೆಯವರೆಗೂ ಬಾಡಿಗೆ ಮನೆಯಲ್ಲೇ ವಾಸವಿದ್ದರು. ಸ್ವಂತಕ್ಕೊಂದು ಮನೆಯನ್ನೂ ಮಾಡಿಕೊಳ್ಳಲಿಲ್ಲ.

Share Post