BengaluruLifestyle

Shakthi Scheme; ದೇವಸ್ಥಾನಗಳಿಗೆ ಮಹಿಳಾ ʻಶಕ್ತಿʼ; ರಾಜ್ಯದ ದೇಗುಲಗಳ ಆದಾಯ ದ್ವಿಗುಣ!

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಎಂಟು ತಿಂಗಳು ಕಳೆದಿದೆ. ಸರ್ಕಾರ ರಚನೆಯಾದ ಕೂಡಲೇ ಆಶ್ವಾಸನೆ ಕಟ್ಟಂತೆ ಗ್ಯಾರೆಂಟಿಗಳನ್ನು ಜಾರಿ ಮಾಡಲಾಗಿತ್ತು. ಅದರಲ್ಲಿ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ. ಈ ಯೋಜನೆ ಜಾರಿಗೆ ಬಂದ ಮೇಲೆ ದೇಗುಲಗಳಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದರ ಜೊತೆಗೆ ದೇಗುಲಗಳ ಆದಾಯ ಕೂಡಾ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಗುಲಗಳ ಆದಾಯ ದುಪ್ಪಟ್ಟಾಗಿದೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇಗುಲಗಳ ಆದಾಯವನ್ನು ಲೆಕ್ಕ ಹಾಕಲಾಗಿದೆ. ಬಹುತೇಕ ಎಲ್ಲಾ ದೇಗುಲಗಳ ಆದಾಯವೂ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಇದಕ್ಕೆ ಕಾರಣ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತವಾಗಿರುವುದು. ಮಹಿಳೆಯರು ಕೆಂಪು ಬಸ್‌ನಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ರಾಜ್ಯದ ಪ್ರಮುಖ ದೇವಾಲಯಗಳಿಗೆ ದಾಖಲೆ ಪ್ರಮಾಣದಲ್ಲಿ ಭಕ್ತರು ಬರುತ್ತಿದ್ದಾರೆ. ಅದರಲ್ಲೂ ಮಹಿಳಾ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕುಕ್ಕೆ ದೇಗುಲಕ್ಕೆ ಹರಿದು ಬಂತು 123 ಕೋಟಿ ರೂಪಾಯಿ ಕಣಿಕೆ!

ಶಕ್ತಿ ಯೋಜನೆ ಜಾರಿಯಾದ ಮೇಲೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದಾರೆ. ಕಳೆದ ವರ್ಷ ಈ ದೇವಸ್ಥಾನಕ್ಕೆ 74 ಕೋಟಿ ರೂಪಾಯಿ ಆದಾಯ ಬಂದಿತ್ತು. ಆದ್ರೆ ಇದೀಗ ಇದು ದುಪ್ಪಟ್ಟಾಗಿದೆ. ಈ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬರೋಬ್ಬರು 123 ಕೋಟಿ ರೂಪಾಯಿ ಆದಾಯ ಬಂದಿದೆ. ಅಂದರೆ ಬರೋಬ್ಬರಿ 49 ಕೋಟಿ ರೂಪಾಯಿ ಹೆಚ್ಚಿನ ಆದಾಯ ಬಂದಿದೆ. ಮುಂದಿನ ದಿನಗಳಲ್ಲಿ ಈ ಆದಾಯ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ಮೂಕಾಂಬಿಕೆ, ಚಾಮುಂಡೇಶ್ವರಿ ಆದಾಯವೂ ಹೆಚ್ಚಳ!

ಶಕ್ತಿ ಯೋಜನೆ ಬಂದ ಮೇಲೆ ಮಹಿಳಾ ಭಕ್ತರು ಧರ್ಮಸ್ಥಳ, ಕುಕ್ಕೆ, ಹೊರನಾಡು, ಕೊಲ್ಲೂರು, ಉಡುಪಿ ಮುಂತಾದ ಸ್ಥಳಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದಾರೆ. ಇದರಲ್ಲಿ ಮಜುತಾಯಿ ಇಲಾಖೆ ವ್ಯಾಪ್ತಿಗೆ ಬರುವ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೂ ಹೆಚ್ಚಿನ ಆದಾಯ ಸಿಕ್ಕಿದೆ. ಕಳೆದ ವರ್ಷ ಈ ದೇಗುಲದ ಆದಾಯ ಬರೀ 31.36 ಕೋಟಿ ರೂಪಾಯಿ ಇತ್ತು. ಆದ್ರೆ ಈ ವರ್ಷ ಅದು 59.47 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇನ್ನು ಮೈಸೂರಿನ ಚಾಮುಂಡೇಶ್ವರಿ ದರ್ಶನಕ್ಕೂ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಚಾಮುಂಡೇಶ್ವರಿಗೆ ಕಳೆದ ವರ್ಷ ಬರೀ 21 ಕೋಟಿ 92 ಲಕ್ಷ ರೂಪಾಯಿ ಆದಾಯ ಬಂದಿತ್ತು. ಆದ್ರೆ ಈ ಬಾರಿ ಅದು ಡಬಲ್‌ ಆಗಿದ್ದು, 52 ಕೋಟಿ 40 ಲಕ್ಷ ರೂಪಾಯಿ ಆದಾಯ ಬಂದಿದೆ.

ಹೀಗೆ ಯಡಿಯೂರು ಸಿದ್ದಲಿಂಗೇಶ್ವರ ದೇಗುಲಕ್ಕೆ 36 ಕೋಟಿ 48 ಲಕ್ಷ ರೂಪಾಯಿ, ಕಟೀಲು ದುರ್ಗಾಪರಮೇಶ್ವರಿ ದೇಗುಲಕ್ಕೆ 32 ಕೋಟಿ 10 ಲಕ್ಷ ರೂಪಾಯಿ ಹಾಗೂ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ 26 ಕೋಟಿ 71 ಲಕ್ಷ ರೂಪಾಯಿ ಹರಿದುಬಂದಿದೆ.

 

Share Post