ರಾಜ್ಯದಲ್ಲಿ ಅಕಾಲಿಕ ಮಳೆ ಪ್ರಭಾವ: ಮಾವಿನ ಫಸಲು ವಿಳಂಬ
ಬೆಂಗಳೂರು: ನವೆಂಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಈ ಬಾರಿ ರಾಜ್ಯದಲ್ಲಿ ಹಣ್ಣುಗಳ ರಾಜ ಮಾವಿನ ಹಂಗಾಮು ಬಹುತೇಕ ಒಂದೂವರೆ, ಎರಡು ತಿಂಗಳು ವಿಳಂಬವಾಗಲಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಮಾವು ಕಾಯಿ ಕಟ್ಟುತ್ತದೆ. ಫೆಬ್ರವರಿ ಅಂತ್ಯ, ಮಾರ್ಚ್ ವೇಳೆ ಫಸಲು ಬೆಳೆಗಾರರ ಕೈ ಸೇರುತ್ತದೆ. ಆದರೆ ಈ ಬಾರಿ ಫೆಬ್ರವರಿ ಪ್ರಾರಂಭವಾಗುತ್ತಾ ಬಂದರೂ ಇನ್ನೂ ಕಾಯಿ ಕಟ್ಟಿಲ್ಲ. ಹೀಗಾಗಿ ಏಪ್ರಿಲ್-ಮೇ ತಿಂಗಳಿಗೆ ಫಸಲು ಕೈ ಸೇರುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಇದು ರಾಜ್ಯದ ಪ್ರಮುಖ ಮಾವು ಬೆಳೆಯುವ ಪ್ರದೇಶಗಳಾದ ರಾಮನಗರ, ಧಾರವಾಡ, ಕೋಲಾರ, ಚಿಕ್ಕಾಬಳ್ಳಾಪುರದ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಕೋವಿಡ್ ನಿಂದಾಗಿ ನಷ್ಟಕ್ಕೊಳಗಾಗಿದ್ದ ರೈತರು, ಈ ಬಾರಿ ಉತ್ತಮ ಮಾವಿನ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವಿನ ಮರಗಳಲ್ಲಿ ಹೂವು, ಕಾಯಿ ವಿಳಂಬವಾಗಿದೆ. ಹೂ, ಕಾಯಿ ಕಟ್ಟದ ಮಾವಿನ ತೋಟಗಳಲ್ಲಿ ಮಾವಿನ ತೋಟಗಳನ್ನು ತೆಗೆದುಕೊಳ್ಳಲು ದಲ್ಲಾಳಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟದ ಭೀತಿ ಉಂಟಾಗಿದೆ.
ಪ್ರತಿ ಬಾರಿ ಏನೇ ಆದರೂ ಅದರ ನೇರ ಹೊಡೆತ ರೈತನಿಗೇ ಬೀಳುತ್ತಿದೆ ಎಂದು ಅನ್ನದಾತರು ಕಂಗಾಲಾಗಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ತೀರದ ನಷ್ಟ ಅನುಭವಿಸಬೇಕಾಯಿತು. ಅಕಾಲಿಕ ಮಳೆಯಿಂದಾಗಿ ಬೆಳೆ ಕೈ ಸೇರದ ಹಾಗಾಗಿದೆ. ಸರ್ಕಾರದಿಂದ ಬೆಂಬಲ ಬೆಲೆಯಿಲ್ಲದೆ ಅದೋಗತಿಗೆ ತಲುಪುವಂತಾಗಿದೆ. ಹೆಚ್ಚು ಮಲೆ ಸುರಿದ್ರೆ ಬೆಳೆಯಲ್ಲಿ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂದು ರೈತರು ಕಣ್ಣಿರಾಕುತ್ತಿದ್ದಾರೆ.