Clown Fish; ಈ ಮೀನುಗಳು ಗಂಡಾಗಿ ಹುಟ್ಟುತ್ತೆ.. ಹೆಣ್ಣಾಗಿ ಬದಲಾಗುತ್ತೆ..!
ಇತ್ತೀಚೆಗೆ ಮನುಷ್ಯರಲ್ಲಿ ಲಿಂಗ ಬದಲಾವಣೆ ಸಾಮಾನ್ಯವಾಗುತ್ತಿದೆ. ಶಸ್ತ್ರ ಚಿಕಿತ್ಸೆ ಮೂಲಕ ಗಂಡು ಹೆಣ್ಣಾಗಿ, ಹೆಣ್ಣು ಗಂಡಾಗಿ ಬದಲಾಗುವ ತಂತ್ರಜ್ಞಾನ ನಮ್ಮಲ್ಲಿದೆ.ಆದರೆ, ಕ್ಲೌನ್ (Clown Fish) ಎಂಬ ಮೀನಿನ ಸಂತತಿಯಲ್ಲಿ ನೈಸರ್ಗಿಕವಾಗಿಯೇ ಲಿಂಗ ಬದಲಾವಣೆಯಾಗುತ್ತದೆ. ಎಲ್ಲಾ ಕ್ಲೌನ್ ಮೀನುಗಳೂ ಮೊದಲು ಗಂಡಾಗಿಯೇ ಹುಟ್ಟುತ್ತವೆ. ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಲಿಂಗ ಬದಲಾವಣೆ ಮಾಡಿಕೊಳ್ಳುತ್ತವೆ. ಇದು ಒಂದು ಪ್ರಕೃತಿಯ ವಿಸ್ಮಯ. (Clownfish are all born males. Once they become female, they cannot be male again)
ಕ್ಲೌನ್ ಮೀನಿನ ಸಂಸಾರವೇ ವಿಚಿತ್ರ
ಹೆಣ್ಣು ಮೀನು ಮೃತಪಟ್ಟರೆ ಮತ್ತೊಂದು ಗಂಡು ಹೆಣ್ಣಾಗಿ ಬದಲಾಗುತ್ತೆ!
ಗುಂಪಿನಲ್ಲಿರುವ ಏಕೈಕ ಹೆಣ್ಣು ಮೃತಪಟ್ಟರೆ, ಪ್ರೌಢಾವಸ್ಥೆಯಲ್ಲಿದ್ದ ಗಂಡು ಹೆಣ್ಣಾಗಿ ಬದಲಾಗುತ್ತದೆ. ಅದು ಕಾಲೋನಿಯ ಮೇಲ್ಬಾಗದಲ್ಲಿ ವಾಸಿಸಲು ಶುರು ಮಾಡುತ್ತದೆ. ಆಗ ಗುಂಪಿನಲ್ಲಿ ನಂತರದ ಸ್ಥಾನದಲ್ಲಿದ್ದ ಮೀನೊಂದು ವೇಗವಾಗಿ ಬೆಳೆದು ಪ್ರೌಢಾವಸ್ಥೆಗೆ ಬಂದು ಹೆಣ್ಣಾಗಿ ಬದಲಾದ ಮೀನಿನೊಂದಿಗೆ ಸರಸವಾಡುತ್ತದೆ. ಹೀಗೆ ಸರದಿಯಂತೆ ಗುಂಡು ಮೀನುಗಳು ಹೆಣ್ಣಾಗಿ ಬದಲಾಗುತ್ತಾ ಹೋಗುತ್ತವೆ. ಕೆಲವು ಮೀನುಗಳು ಗಂಡಾಗಿದ್ದಾಗಲೇ ಸತ್ತುಹೋಗುತ್ತವೆ. ಅದು ಬಿಟ್ಟರೆ ಇವು ಒಂದು ಹಂತದಲ್ಲಿ ಹೆಣ್ಣಾಗಿ ಬದಲಾಗಲೇ ಬೇಕಿರುತ್ತದೆ. ಇಲ್ಲಿ ಹೆಣ್ಣಿನ ಸ್ಥಾನ ಅತ್ಯಂತ ಉತ್ಕೃಷ್ಟ. ಹೀಗಾಗಿ ಎಲ್ಲಾ ಗಂಡು ಕ್ಲೌನ್‍ಗಳೂ ಹೆಣ್ಣಾಗಿ ಬದಲಾಗಲು ಹಾತೊರೆಯುತ್ತಿರುತ್ತವೆ.
ಅಮಾವಾಸ್ಯೆ ಹಾಗೂ ಹುಣ್ಣಿಮೆ ಆಸುಪಾಸಿನಲ್ಲೇ ಮರಿಗಳಾಗುತ್ತವೆ!
ಹುಣ್ಣಿಮೆ ಮತ್ತು ಅಮಾವಾಸ್ಯೆ ಆಸುಪಾಸಿನ ದಿನಗಳಲ್ಲಿ ಮರಿಗಳು ಜನಿಸುವಂತೆ ಕ್ಲೌನ್ ಮೀನುಗಳು ಮೊಟ್ಟೆ ಇಡುತ್ತವೆ. ಮೊಟ್ಟೆ ಇಟ್ಟ ನಂತರ ಹೆಣ್ಣು ಮೀನಿನ ಕರ್ತವ್ಯ ಮುಗಿಯುತ್ತದೆ. ನಂತರ ಪ್ರೌಢಾವಸ್ಥೆಯಲ್ಲಿರುವ ಗಂಡು ಮೀನು ಮೊಟ್ಟೆಗಳಿಂದ ಮರಿಗಳು ಹೊರಬರುವ ತನಕ ಅಂದರೆ 6 ರಿಂದ 8 ದಿನಗಳ ಕಾಲ ಅವುಗಳನ್ನು ಕಾಪಾಡುತ್ತದೆ. ಹುಟ್ಟುವ ಕ್ಲೌನ್ ಮೀನಿನ ಮರಿಗಳೆಲ್ಲವೂ ಗಂಡಾಗಿಯೇ ಹುಟ್ಟುತ್ತವೆ. ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಅವು ಹೆಣ್ಣಾಗಿ ಮಾರ್ಪಡಬೇಕಾಗುತ್ತದೆ.
ಸಮುದ್ರದ ಹೆಚ್ಚು ಆಳವಿಲ್ಲದ ಪ್ರದೇಶದಲ್ಲಿ ಮಾತ್ರ ವಾಸ!
ಗರಿಷ್ಠ 18 ಸೆಂಟಿ ಮೀಟರ್‍ನಷ್ಟು ಬೆಳೆಯುವ ಕ್ಲೌನ್ ಮೀನುಗಳುಹಳದಿ, ಕೆಂಪು ಹಾಗೂ ಕಿತ್ತಲೆ ಬಣ್ಣದಲ್ಲಿರುತ್ತವೆ. ನಡುವೆ ಇರುವ ಬಿಳಿ ಪಟ್ಟೆಗಳುಕ್ಲೌನ್ ಮೀನುಗಳ ಸೌಂದರ್ಯವನ್ನು ಹೆಚ್ಚಿಸಿವೆ. ಕೆಂಪು ಸಮುದ್ರ, ಮಹಾ ಹವಳ ದಿಬ್ಬ ಸೇರಿ ಹಿಂದೂ ಮಹಾಸಾಗರದಲ್ಲಿ ಹೆಚ್ಚು ಆಳವಿಲ್ಲದ ಪ್ರದೇಶದಲ್ಲಿ ಇವು ವಾಸಿಸುತ್ತವೆ. ತಮಿಳುನಾಡಿನ ರಾಮೇಶ್ವರಂ ಹತ್ತಿರ ಹಾಗೂ ಅಂಡಮಾನ್ ಸಮುದ್ರ ತೀರದಲ್ಲಿ ಈ ಕ್ಲೌನ್ ಮೀನುಗಳನ್ನು ಕಾಣಬಹುದು.
ಕ್ಲೌನ್ ಮೀನುಗಳಿಗೆ ಸೀ ಅನೆಮೋನ್‌ಗಳೇ ಬಾಡಿಗಾರ್ಡ್‌ಗಳು!
ಸೀ ಅನೆಮೊನ್ ಎಂಬ ಮತ್ತೊಂದು ಸಾಗರ ಜೀವಿಯ ಜೊತೆ ಈ ಮೀನು ಹೊಂದಾಣಿಕೆಯ ಜೀವನ ನಡೆಸುತ್ತದೆ. ಬೇರೆ ಪ್ರಾಣಿಗಳು ತಿನ್ನಲು ಬಂದರೆ ಸಿ ಅನೆಮೋನ್‍ಗಳು ಕ್ಲೌನ್ ಮೀನಿಗೆ ರಕ್ಷಣೆ ಒದಗಿಸುತ್ತವೆ. ಇನ್ನು ಇದಕ್ಕೆ ಪ್ರತಿಯಾಗಿ ಕ್ಲೌನ್ ಮೀನುಗಳು ತಮ್ಮ ರಂಗು ರಂಗಾದ ಬಣ್ಣದಿಂದ ಇತರ ಮೀನುಗಳನ್ನು ತನ್ನತ್ತ ಸೆಳೆಯುತ್ತವೆ. ಹತ್ತಿರ ಬರುವ ಆ ಮೀನುಗಳನ್ನು ಸಿ ಅನೆಮೊನ್‍ಗಳು ತಿನ್ನುತ್ತವೆ. ಸಿ ಅನೆಮೋನ್ ವಿಷ ಉಗುಳುತ್ತದೆ. ತನ್ನ ಹತ್ತಿರಕ್ಕೆ ಬರುವ ಮೀನುಗಳ ಮೇಲೆ ವಿಷವನ್ನು ಉಗುಳಿ ಸಾಯಿಸುತ್ತದೆ. ನಂತರ ಅವುಗಳನ್ನು ಸೇವಿಸುತ್ತದೆ. ಆಶ್ಚರ್ಯವೆಂದರೆ ಸಿ ಅನೆಮೊನ್ ಮೀನಿನ ವಿಷ ಬಿದ್ದರೂ ಕ್ಲೌನ್ ಮೀನಿಗೆ ಏನೂ ಆಗುವುದಿಲ್ಲ. ಹೀಗಾಗಿ ಬೇರೆ ಪ್ರಾಣಿಗಳು ದಾಳಿ ಮಾಡಲು ಬಂದಾಗ ಕ್ಲೌನ್ ಮೀನುಗಳು ಸಿ ಅನೆಮೊನ್ ಹಿಂದೆ ಅವಿತುಕೊಳ್ಳುತ್ತವೆ. ಹೀಗಾಗಿ ಕ್ಲೌನ್ ಮೀನುಗಳನ್ನು ಸಿ ಅನೆಮೋನ್‍ಗಳು ಅಂತಾನೂ ಕರೆಯುತ್ತಾರೆ. 6 ರಿಂದ 10 ವರ್ಷ ಬದುಕುವ ಕ್ಲೌನ್ ಮೀನುಗಳು, ಸೂಕ್ಷ್ಮ ಸಸ್ಯ, ಸೂಕ್ಷ್ಮಾಣು ಜೀವಿಗಳನ್ನು ತಿಂದು ಬದುಕುತ್ತವೆ. ಸಿ ಅನೆಮೊನ್‍ಗಳು ತಿಂದು ಉಳಿದದ್ದನ್ನೂ ಇವುಗಳು ಸೇವಿಸುತ್ತವೆ. ನೋಡಲು ಸುಂದರವಾಗಿರುವುದರಿಂದ ಇತ್ತೀಚೆಗೆ ಇವುಗಳನ್ನು ಅಕ್ವೇರಿಯಂಗಳಲ್ಲೂ ಬೆಳೆಸಲಾಗುತ್ತಿದೆ.