ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಿರೂಪಕನಿಗೆ ಕಪಾಳ ಮೋಕ್ಷ ಪ್ರಶಸ್ತಿ
ನವದೆಹಲಿ: ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾರ್ಯಕ್ರಮದ ನಿರೂಪಕನಿಗೆ ಕಪಾಳಮೋಕ್ಷ ಪ್ರಶಸ್ತಿ ಸಿಕ್ಕಿದೆ. ಹೌದು, 2021-22ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕ ತನ್ನ ಪತ್ನಿಯನ್ನು ಹೀಯಾಳಿಸಿದ ಎಂಬ ಕಾರಣಕ್ಕಾಗಿ ನಟ ವಿಲ್ ಸ್ಮಿತ್ ಕೋಪಗೊಂಡು ವೇದಿಕೆ ಮೇಲೆಯೇ ನಿರೂಪಕನ ಕಪಾಳಕ್ಕೆ ಹೊಡೆದಿದ್ದಾರೆ. ನಿನ್ನೆ ರಾತ್ರಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ನಟ ವಿಲ್ ಸ್ಮಿತ್ರ ಪತ್ನಿ ಜಡಾ ಪಿಂಕೆಟ್ ಸ್ಮಿತ್ರ ಬೋಳು ತಲೆಯ ಬಗ್ಗೆ ನಿರೂಪಕ ಕ್ರಿಸ್ ರಾಕ್ ವೇದಿಕೆ ಮೇಲೆ ತಮಾಷೆಯಾಗಿ ಮಾತನಾಡಿದ್ದಾರೆ. ಜಡಾ ನೀವು ಬೋಳು ತಲೆಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ಇಷ್ಟಪಡುತ್ತೇನೆ ಎಂದಾಗ ಇಡೀ ಸಭಾಂಗಣ ಗೊಳ್ಳೆಂದು ನಕ್ಕಿದೆ. ಇದರಿಂದ ನಟ ವಿಲ್ ಸ್ಮಿತ್ ಕೋಪಗೊಂಡರು. ವೇದಿಕೆಗೆ ತೆರಳಿ ನಿರೂಪಕ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದಿದ್ದಾರೆ. ಅಲ್ಲದೆ ನನ್ನ ಹೆಂಡತಿಯ ಹೆಸರನ್ನು ನಿಮ್ಮ ಬಾಯಲ್ಲಿ ಹೇಳಬೇಡಿ ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ. ಇದರಿಂದ ಕೆಲಹೊತ್ತು ಕಾರ್ಯಕ್ರಮದಲ್ಲಿ ಗಲಿಬಿಲಿ ಉಂಟಾಗಿದೆ.
ವಿಲ್ ಸ್ಮಿತ್ರ ಪತ್ನಿ ಜಡಾ ಪಿಂಕೆಟ್ ಅಲೋಪೆಸಿಯಾ ಎಂಬ ಕಾಯಿಲೆಗೆ ತುತ್ತಾಗಿದ್ದು, ಈ ಕಾರಣಕ್ಕಾಗಿ ಅವರು ತಮ್ಮ ಕೂದಲನ್ನು ಕತ್ತರಿಸಿದ್ದಾರೆ. ಇದನ್ನು ಅರಿಯದ ನಿರೂಪಕ ಕ್ರಿಸ್ ರಾಕ್ ಸಿನಿಮಾಕ್ಕಾಗಿ ಕೂದಲು ಕತ್ತರಿಸಿಕೊಂಡಿದ್ದಾರೆ ಎಂದು ತಮಾಷೆ ಮಾಡಿ ಪೆಟ್ಟು ತಿಂದಿದ್ದಾರೆ.