ಟೀ ಕುಡಿಯೋದನ್ನ ಕಡಿಮೆ ಮಾಡಿ, ಆರ್ಥಿಕತೆ ಉಳಿಸಿ; ಪಾಕ್ ಸರ್ಕಾರ ಮನವಿ..!
ಕರಾಚಿ; ನನ್ನ ದೇಶದ ಜನರೇ.. ದಯವಿಟ್ಟು ಚಹಾ ಕುಡಿಯುವುದನ್ನು ಕಡಿಮೆ ಮಾಡಿ. ಈ ಮೂಲಕ ದೇಶದ ಅರ್ಥಿಕತೆಯನ್ನು ಉಳಿಸಿ ಅಂತ ಪಾಕಿಸ್ತಾನ ಸರ್ಕಾರ, ತನ್ನ ಪ್ರಜೆಗಳ ಬಳಿ ಮನವಿ ಮಾಡಿಕೊಂಡಿದೆ. ಹೌದು, ದೇಶದ ಅರ್ಥಿಕತೆ ಕುಸಿಯದಂತೆ ನೋಡಿಕೊಳ್ಳಬೇಕಾದುದು ದೇಶದ ಪ್ರತಿಯೊಬ್ಬರ ಜವಾಬ್ದಾರಿ. ಹೀಗಾಗಿ ಚಹಾ ಕುಡಿಯುವುದನ್ನು ಕಡಿಮೆ ದೇಶದ ಆರ್ಥಿಕತೆ ಉಳಿಸುವಂತೆ ಪಾಕಿಸ್ತಾನದ ಸಚಿವ ಎಹ್ಸಾನ್ ಇಕ್ಬಾಲ್ ಮನವಿ ಮಾಡಿದ್ದಾರೆ.
ಪಾಕಿಸ್ತಾನಿಯರು ಅತಿಹೆಚ್ಚು ಟೀ ಕುಡಿಯುತ್ತಾರೆ. ಹೀಗಾಗಿ ಜನರು ಪ್ರತಿ ದಿನ ಕುಡಿಯುವ ಚಹಾದ ಕಪ್‌ಗಳ ಸಂಖ್ಯೆ ಕಡಿಮೆ ಮಾಡಿದರೆ, ಚಹಾದ ಭಾರಿ ಆಮದಿನ ವೆಚ್ಚವು ಕಡಿಮೆಯಾಗಲಿದೆ ಎಂದು ಪಾಕಿಸ್ತಾನದ ಹಿರಿಯ ಸಚಿವ ಎಹ್ಸಾನ್ ಇಕ್ಬಾಲ್ ಅವರು ಹೇಳಿದ್ದಾರೆ. ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹವು ಗಮನಾರ್ಹವಾಗಿ ಕುಸಿದಿದೆ. ಪ್ರಸ್ತುತ, ಆಮದುಗಳಿಗಾಗಿ ಪಾವತಿಸಬಹುದಾದ ಠೇವಣಿಗಳು ಕೇವಲ ಎರಡು ತಿಂಗಳಿಗೆ ಅಷ್ಟೇ ಸಾಕಾಗುತ್ತದಂತೆ. ಇದು ದೇಶಕ್ಕೆ ಹಣದ ಅವಶ್ಯಕತೆಯನ್ನುಂಟು ಮಾಡಿದೆ.
ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ಚಹಾ ಆಮದು ಮಾಡಿಕೊಳ್ಳುವ ದೇಶವಾಗಿದೆ. ಕಳೆದ ವರ್ಷ ಪಾಕಿಸ್ತಾನವು 600 ಮಿಲಿಯನ್ ಡಾಲರ್ (ಸುಮಾರು 5,000 ಕೋಟಿ ರೂ.) ಮೌಲ್ಯದ ಚಹಾವನ್ನು ಆಮದು ಮಾಡಿಕೊಂಡಿತ್ತು. ಹೀಗಾಗಿ, ಆಮದಿನ ವೆಚ್ಚ ಜಾಸ್ತಿಯಾಗಲಿದ್ದು, ಆರ್ಥಿಕತೆ ಕುಸಿಯಲು ಭಾರಿ ಪ್ರಮಾಣದ ಟೀ ಆಮದು ಕೂಡಾ ಕಾರಣ ಎಂದು ಪಾಕ್ ಸರ್ಕಾರ ಅಳಲು ತೋಡಿಕೊಂಡಿದೆ.
“ದಿನಕ್ಕೆ ಒಂದು ಅಥವಾ ಎರಡು ಕಪ್ ಚಹಾ ಕುಡಿಯುವುದನ್ನು ಕಡಿಮೆ ಮಾಡುವಂತೆ ನಾನು ದೇಶದ ಜನರಿಗೆ ಮನವಿ ಮಾಡುತ್ತೇನೆ. ಏಕೆಂದರೆ ನಾವು ಸಾಲದ ಮೇಲೆ ಚಹಾವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ” ಎಂದು ಇಕ್ಬಾಲ್ ಪಾಕಿಸ್ತಾನದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಏತನ್ಮಧ್ಯೆ, ಸರ್ಕಾರದ ಕ್ರಮಗಳಿಂದಾಗಿ ಬೆಲೆಗಳು ಹೆಚ್ಚಾಗಿವೆ ಮತ್ತು ಹೆಚ್ಚಿದ ಬೆಲೆಗಳನ್ನು ಕಡಿಮೆ ಮಾಡದೆ ಚಹಾ ಸೇವನೆಯನ್ನು ಕಡಿಮೆ ಮಾಡಲು ಜನರನ್ನು ಕೇಳುವುದು ತಪ್ಪು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಕೇಳಿಬರುತ್ತಿವೆ.
ವಿದ್ಯುತ್ ಉಳಿಸಲು ರಾತ್ರಿ 8:30 ರೊಳಗೆ ಮಾರುಕಟ್ಟೆಗಳಲ್ಲಿನ ವ್ಯಾಪಾರಗಳು, ಅಂಗಡಿಗಳು ಮತ್ತು ಮಳಿಗೆಗಳನ್ನು ಮುಚ್ಚಬೇಕೆಂದು ಸೂಚನೆ ನೀಡಲಾಗಿದೆ. ಇದರ ನಡುವೆ ಜನರು ಚಹಾ ಸೇವನೆಯನ್ನು ಕಡಿಮೆ ಮಾಡಬೇಕು ಎಂಬ ಸರ್ಕಾರದ ವಿನಂತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಹಾ ಸೇವನೆಯನ್ನು ಕಡಿಮೆ ಮಾಡುವುದರಿಂದ ದೇಶದ ಆರ್ಥಿಕತೆಯ ಸಮಸ್ಯೆಗಳನ್ನು ಪರಿಹರಿಸಬಹುದೇ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿಯಲ್ಲಿ ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹವು 16 ಬಿಲಿಯನ್ ಡಾಲರ್ ಆಗಿತ್ತು. ಜೂನ್ ಮೊದಲ ವಾರದಲ್ಲಿ ಅದು 10 ಬಿಲಿಯನ್ ಡಾಲರ್ ಗೆ ಕುಸಿಯಿತು. ಆ ದೇಶವು ಮಾಡಿದ ಎಲ್ಲಾ ಆಮದುಗಳು ಕೇವಲ ಎರಡು ತಿಂಗಳ ಪಾವತಿಗಳಿಗೆ ಮಾತ್ರ ಸಾಕಾಗುತ್ತವೆ. ಕಳೆದ ತಿಂಗಳು, ಈ ನಿಧಿಗಳನ್ನು ಉಳಿತಾಯವಾಗಿ ಬಳಸುವ ಪ್ರಯತ್ನದ ಭಾಗವಾಗಿ, ಅಗತ್ಯವಲ್ಲದ ಐಷಾರಾಮಿ ವಸ್ತುಗಳ ಆಮದನ್ನು ಸರ್ಕಾರ ನಿಲ್ಲಿಸಿದೆ.
ಏಪ್ರಿಲ್‌ನಲ್ಲಿ ಪಾಕಿಸ್ತಾನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆ ವೇಳೆ ಇಮ್ರಾನ್ ಖಾನ್ ಅವರ ಸರ್ಕಾರ ಪತನಗೊಂಡಿತ್ತು. ಕೆಲವು ದಿನಗಳ ನಂತರ, ಶಹಬಾಜ್ ಶರೀಫ್ ಅವರನ್ನು ಪ್ರಧಾನಿಯಾಗಿ ಹೊಸ ಸರ್ಕಾರವನ್ನು ರಚಿಸಲಾಯಿತು. ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಈ ಹೊಸ ಸರ್ಕಾರಕ್ಕೆ ಗಂಭೀರ ಅಗ್ನಿ ಪರೀಕ್ಷೆಯಾಗಿದೆ.
ಶಹಬಾಜ್ ಖಾನ್ ಅವರು ಇಮ್ರಾನ್ ಖಾನ್ ಸರ್ಕಾರವನ್ನು “ಆರ್ಥಿಕತೆಯನ್ನು ದುರ್ಬಲಗೊಳಿಸಿದ್ದಾರೆ” ಎಂದು ಟೀಕಿಸಿದ್ದಾರೆ. ಅದನ್ನು ಸರಿದಾರಿಗೆ ತರುವುದು ದೊಡ್ಡ ಸವಾಲಾಗಲಿದೆ. ಪಾಕಿಸ್ತಾನದ ಆರ್ಥಿಕತೆಯು ಹಲವಾರು ವರ್ಷಗಳಿಂದ ಬೆಳವಣಿಗೆಯಿಲ್ಲದೆ ನಿಶ್ಚಲವಾಗಿದೆ ಮತ್ತು ವಿದೇಶಿ ವಿನಿಮಯ ಮೀಸಲುಗಳ ಕೊರತೆಯಿಂದಾಗಿ ಹಲವಾರು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದೆ. 2019 ರಲ್ಲಿ, ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಸಾಲ ತೆಗೆದುಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ.. ಪಾಕಿಸ್ತಾನದ ಆರ್ಥಿಕ ಸಂಪನ್ಮೂಲಗಳ ಸ್ಥಿತಿಯ ಬಗ್ಗೆ ಐಎಂಎಫ್ ಪ್ರಶ್ನೆಗಳನ್ನು ಎತ್ತಿದೆ. ಇದರ ಪರಿಣಾಮವಾಗಿ, ಐಎಂಎಫ್ ಸಹಾಯ ಯೋಜನೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಯಿತು.
ಶಹಬಾಜ್ ಅವರ ಸಚಿವ ಸಂಪುಟವು ಕಳೆದ ವಾರ 47 ಬಿಲಿಯನ್ ಡಾಲರ್ ವೆಚ್ಚದ ಹೊಸ ಬಜೆಟ್ ಅನ್ನು ಘೋಷಿಸಿತು. ಇದನ್ನು ಪುನರಾರಂಭಿಸಲು ಐಎಂಎಫ್ ಅನ್ನು ಮನವೊಲಿಸುವ ಗುರಿಯನ್ನು ಹೊಂದಿತ್ತು.