InternationalLifestyle

ಇಲ್ಲಿ ಪತಿ, ಪತ್ನಿಯರು ಬಾಡಿಗೆಗೆ ಸಿಗುತ್ತಾರೆ..!

ವಸ್ತುಗಳನ್ನು, ವಾಹನಗಳನ್ನು ಹೀಗೆ ಏನೆನನ್ನೋ ಬಾಡಿಗೆ ಕೊಡುವುದನ್ನು ನೋಡಿದ್ದೇವೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಜಪಾನ್‌ನಲ್ಲಿ ಈಗ ಸಂಬಂಧಗಳು ಕೂಡಾ ಬಾಡಿಗೆಗೆ ಸಿಗುತ್ತವೆ. ನಿಮಗೆ ಹೆಂಡತಿ ಬೇಕೆಂದರೆ ಬಾಡಿಗೆಗೆ ಸಿಗುತ್ತಾಳೆ. ಗಂಡ, ಅಪ್ಪ, ಅಮ್ಮ, ಸೊಸೆ, ಮಗಳು ಹೀಗೆ ಯಾರು ಬೇಕೆಂದರೂ ಬಾಡಿಗೆಗೆ ಸಿಗುತ್ತಾರೆ. ಸಂಬಂಧಗಳನ್ನೇ ಬಾಡಿಗೆಗೆ ಕೊಡುವ ಕಂಪನಿಯೊಂದನ್ನು ಶುರು ಮಾಡಿರುವ ಇಷಿ ಎಂಬುವವರು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ನೂರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ.

ಜಪಾನ್‌ನಲ್ಲಿ ಫ್ಯಾಮಿಲಿ ರೊಮ್ಯಾನ್ಸ್‌ ಹೆಸರಿನ ಸಂಸ್ಥೆಯನ್ನು ಇಷಿ ನಡೆಸುತ್ತಿದ್ದಾರೆ. ಈ ಸಂಸ್ಥೆ ನಮಗೆ ಯಾವ ಸಂಬಂಧಗಳು ಬೇಕೋ, ಅಂದರೆ ಹೆಂಡತಿ, ಗಂಡ, ಅಪ್ಪ, ಅಮ್ಮ ಹೀಗೆ ಯಾರು ಬೇಕೋ ಅವರನ್ನು ಬಾಡಿಗೆಗೆ ನೀಡುತ್ತೆ. ಈ ಫ್ಯಾಮಿಲಿ ರೊಮ್ಯಾನ್ಸ್‌ ಕಂಪನಿಯಲ್ಲಿ ಸದ್ಯ ೨೨೦೦ ಮಂದಿ ಕೆಲಸ ಮಾಡುತ್ತಿದ್ದಾರೆ. ಇವರು ಯಾವುದಾದರೂ ದುರ್ಘಟನೆಯಲ್ಲಿ ಆತ್ಮೀಯರು, ಹತ್ತಿರದ ಸಂಬಂಧಿಗಳನ್ನು ಕಳೆದುಕೊಂಡವರಿಗೆ, ಕೌಟುಂಬಿಕ ಕಲಹದಿಂದ ದೂರ ದೂರವಾದವರಿಗೆ ತಾಯಿಯಾಗಿ, ತಂದೆಯಾಗಿ, ಸಹೋದರ, ಸಹೋದರಿಯಾಗಿ, ಗಂಡನಾಗಿ, ಹೆಂಡತಿಯಾಗಿ ಹೀಗೆ ನಾನಾ ಪಾತ್ರಗಳನ್ನು ಬಾಡಿಗೆ ಪಡೆದು ನಿಭಾಯಿಸುತ್ತಾರೆ.

ಸಂಸ್ಥೆಯ ಮುಖ್ಯಸ್ಥ ಯೂಚಿ ಇಷಿ ಹೀಗೆ ಹೇಳುತ್ತಾರೆ:
ʻನನ್ನ ವಯಸ್ಸು ೩೯ ವರ್ಷ. ನನಗೆ ಈಗ ೨೫ಕ್ಕೂ ಹೆಚ್ಚು ಕುಟುಂಬಗಳಿವೆ. ೩೫ ಮಕ್ಕಳಿಗೆ ನಾನು ಈಗ ಅಪ್ಪ. ಆದರೆ ಆ ಮಕ್ಕಳು ನನ್ನ ಸ್ವಂತ ಮಕ್ಕಳಲ್ಲ. ನಾನು ಆ ಮಕ್ಕಳ ಬಾಡಿಗೆ ತಂದೆ ಮಾತ್ರ. ಅಂದರೆ ಹಣ ತೆಗೆದುಕೊಂಡು ಆ ಮಕ್ಕಳಿಗೆ ತಂದೆಯಂತೆ ನಟಿಸುತ್ತೇವೆ. ಆ ಮೂಲಕ ಆ ಮಕ್ಕಳಿಗೆ ತಂದೆ ಇಲ್ಲವೆಂಬ ಕೊರಗನ್ನು ನೀಗಿಸುತ್ತೇನೆ. ವಾರಕ್ಕೆ ಎರಡು ಮೂರು ಬಾರಿ ಅವರ ಮನೆಗೆ ಹೋಗಿ ಅವರೊಂದಿಗೆ ನಾಲ್ಕು ಗಂಟೆ ಕಳೆಯುತ್ತೇನೆ.ʼ

ಈ ಸಂಸ್ಥೆ ಹುಟ್ಟಿನ ಹಿಂದೆ ಇದೆ ಕರುಣಾಜನಕ ಕಥೆ..!
೧೫ ವರ್ಷಗಳ ಹಿಂದೆ ಫ್ಯಾಮಿಲಿ ರೊಮ್ಯಾನ್ಸ್‌ ಸಂಸ್ಥೆಯ ಮುಖ್ಯಸ್ಥ ಇಷಿ ಸ್ನೇಹಿತೆಯೊಬ್ಬಳಿಗೆ ಒಂದು ಸಮಸ್ಯೆ ಎದುರಾಗಿತ್ತು. ಇಷಿ ಸ್ನೇಹಿತೆ ತಮ್ಮ ಮಗನನ್ನು ಒಂದು ಖಾಸಗಿ ಶಾಲೆಯಲ್ಲಿ ಸೇರಿಸಲು ಹೋಗುತ್ತಾಳೆ. ಆದರೆ ಶಾಲೆಯವರು ಮಗುವಿನ ತಂದೆ-ತಾಯಿ ಇಬ್ಬರೂ ಬಂದರೆ ಮಾತ್ರ ಶಾಲೆಗೆ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ ಆಕೆ ಒಂಟಿ ಮಹಿಳೆ. ಈ ಕಾರಣದಿಂದಾಗಿ ಇಷಿ ನಾನು ನಿನ್ನ ಗಂಡನಾಗಿ ನಟಿಸುತ್ತೇನೆಂದು ಹೇಳುತ್ತಾನೆ. ಈ ಮೂಲಕ ತನ್ನ ಸ್ನೇಹಿತೆಯ ಮಗನಿಗೆ ಖಾಸಗಿ ಶಾಲೆಯಲ್ಲಿ ಸೀಟು ಕೊಡಿಸುತ್ತಾನೆ. ಆದರೂ ಇಷಿಗೆ ತಾನು ಸರಿಯಾಗಿ ನಟಿಸಲಿಲ್ಲ ಎಂಬ ಭಾವನೆ ಬರುತ್ತದೆ. ಜೊತೆಗೆ ತನ್ನ ಸ್ನೇಹಿತೆಯ ರೀತಿ ನಾನಾ ಕಾರಣಕ್ಕಾಗಿ ತೊಂದರೆ ಅನುಭವಿಸುತ್ತಿರುವವರು ತುಂಬಾ ಜನ ಇರುತ್ತಾರೆ. ಅವರಿಗಾಗಿ ಸೂಕ್ತ ತರಬೇತಿ ಪಡೆದು ಬೇಕಾದ ಪಾತ್ರದಲ್ಲಿ ನಟಿಸುವವರ ಸಂಸ್ಥೆಯನ್ನು ಯಾಕೆ ತೆರೆಯಬಾರದು ಎಂದು ಆಲೋಚನೆ ಇಷಿಗೆ ಬರುತ್ತದೆ. ಅದರ ಪ್ರತಿಫಲವೇ ಈ ಫ್ಯಾಮಿಲಿ ರೊಮ್ಯಾನ್ಸ್‌ ಸಂಸ್ಥೆ.
ʻನಾನು ಹಾಗೂ ನನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ನಕಲಿ ಬಂಧುಗಳೇ. ಆದರೆ, ನಮ್ಮನ್ನು ಬಾಡಿಗೆ ಪಡೆದಿರುವವರ ಜೊತೆ ಇರುವ ನಾಲ್ಕು ಗಂಟೆ ಸಮಯದಲ್ಲಿ ಅಸಲಿ ಬಂಧುಗಳಂತೆಯೇ ಇರುತ್ತೇವೆ. ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತೇವೆ. ಅವರ ಪ್ರಾಣ ಸ್ನೇಹಿತರಾಗಿ ವ್ಯವಹರಿಸುತ್ತೇವೆʼ ಹೀಗಂತ ಇಷಿ ಹೇಳ್ತಾರೆ.

ಫ್ಯಾಮಿಲಿ ರೊಮ್ಯಾನ್ಸ್‌ ಸಂಸ್ಥೆ ಕಸ್ಟಮರ್‌ಗಳು ವಿಭಿನ್ನ ರೀತಿಯ ಅವಶ್ಯಕತೆಗಳನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಕೆಲವರು ತಮಗೆ ಗಂಡನಾಗಿ ನಟಿಸುವವರು ಬೇಕು, ಹೆಂಡತಿಯಾಗಿ ನಟಿಸುವವರು ಬೇಕು ಎಂದು ಬರುತ್ತಾರೆ. ಅದಕ್ಕೆ ಅವರ ವಯಸ್ಸು, ಎತ್ತರಕ್ಕೆ ತಕ್ಕಂತೆ ಇರುವ ಮಹಿಳೆ ಅಥವಾ ಪುರುಷನನ್ನು ಈ ಸಂಸ್ಥೆ ಆಯ್ಕೆ ಮಾಡಿ ಕಳುಹಿಸುತ್ತದೆ. ತಮಗೆ ಸ್ನೇಹಿತರೇ ಇಲ್ಲ ಎಂದು ಕೊರಗುವವರು ಕೂಡಾ ಇಲ್ಲಿಗೆ ಬರುತ್ತಾರೆ. ಅವರಿಗೆ ಫ್ಯಾಮಿಲಿ ರೊಮ್ಯಾನ್ಸ್‌ ಸಂಸ್ಥೆ ಬಾಡಿಗೆ ಸ್ನೇಹಿತರನ್ನು ಒದಗಿಸಿಕೊಡುತ್ತದೆ. ಹೀಗೆ ಸ್ನೇಹಿತರನ್ನು ಬಾಡಿಗೆಗೆ ಪಡೆಯುವವರ ಜೊತೆ ನಾವು, ಅವರಿಗೆ ಎಷ್ಟೋ ವರ್ಷಗಳಿಂದ ಸ್ನೇಹಿತರಾಗಿರುವಂತೆ ವ್ಯವಹರಿಸುತ್ತೇವೆ. ಜೊತೆಗೆ ಶಾಪಿಂಗ್‌ಗೆ ಹೋಗುತ್ತೇವೆ. ಚಾಟಿಂಗ್‌ ಮಾಡುತ್ತಾ ಟೈಂ ಪಾಸ್‌ ಮಾಡುತ್ತೇವೆ. ಡಿನ್ನರ್‌ ಪಾರ್ಟಿಗಳಲ್ಲೂ ಪಾಲ್ಗೊಳ್ಳುತ್ತೇವೆ ಅಂತಾರೆ ಸಂಸ್ಥೆಯ ಉದ್ಯೋಗಿಯೊಬ್ಬರು.
ಇಷ್ಟೇ ಅಲ್ಲ, ಕೆಲವರು ವೃದ್ಧರು ತಮಗೆ ಮಕ್ಕಳು ಬೇಕು, ಸೊಸೆಯಂದಿರು ಬೇಕು, ಮೊಮ್ಮಕ್ಕಳು ಬೇಕು ಎಂದು ಕೇಳುತ್ತಾರೆ. ಅವರ ಬೇಡಿಕೆಗೆ ತಕ್ಕಂತೆ ಇಷಿ, ಬಾಡಿಗೆ ಸಂಬಂಧಿಕರನ್ನು ಕಳುಹಿಸಿಕೊಡುತ್ತಾರಂತೆ.

ತಂದೆ ಪಾತ್ರಕ್ಕೆ ಭಾರಿ ಡಿಮ್ಯಾಂಡ್‌..!
ಜಪಾನ್‌ನಲ್ಲಿ ತಂದೆ ಪಾತ್ರಕ್ಕೆ ಭಾರಿ ಡಿಮ್ಯಾಂಡ್‌ ಇದೆಯಂತೆ. ಜಪಾನ್‌ ನಲ್ಲಿ ಪ್ರತಿ ವರ್ಷ ೨ ಲಕ್ಷಕ್ಕೂ ಅಧಿಕ ದಂಪತಿಗಳು ಡಿವೋರ್ಸ್‌ ತೆಗೆದುಕೊಳ್ಳುತ್ತಿದ್ದಾರೆ. ತಂದೆ ಅಥವಾ ತಾಯಿ ಮಾತ್ರ ಇರುವ ಕುಟುಂಬಗಳು ಪ್ರತಿ ವರ್ಷಗಳ ಬೆಳೆಯುತ್ತಲೇ ಇವೆ. ಅವರೆಲ್ಲಾ ಫ್ಯಾಮಿಲಿ ರೊಮ್ಯಾನ್ಸ್‌ ಸಂಸ್ಥೆ ಬಳಿ ಬರುತ್ತಾರೆ.
ಡಿವೋರ್ಸ್‌ ಪಡೆದ ನಂತರ ಸಾಮಾನ್ಯವಾಗಿ ತಾಯಿಯೇ ಮಕ್ಕಳನ್ನು ಸಾಕುತ್ತಿರುತ್ತಾಳೆ. ಆ ಮಕ್ಕಳಿಗೆ ತಂದೆ ಇಲ್ಲ ಎಂಬ ಕೊರಗು ಇರಬಾರದು ಅಂತ ಬಾಡಿಗೆ ತಂದೆಯನ್ನು ಪಡೆಯಲು ಮಹಿಳೆಯರು ಇಲ್ಲಿಗೆ ಬರುತ್ತಾರಂತೆ. ಅದರಲ್ಲೂ ಇಂತಹ ಸ್ವಭಾವದ ತಂದೆಯೇ ನನ್ನ ಮಕ್ಕಳಿಗೆ ಬೇಕು ಎಂದು ಕೇಳುವವರು ಹೆಚ್ಚಿದ್ದಾರಂತೆ. ಕೆಲವರು ತುಂಬಾ ಮೃಧು ಸ್ವಭಾವದ ಪಾತ್ರಧಾರಿ ಬೇಕು ಎಂದು ಕೇಳಿದರೆ, ಇನ್ನು ಕೆಲವರು ತುಂಬಾ ಕಠಿಣವಾಗಿ ವ್ಯವಹರಿಸುವವವರು ಬೇಕು ಎಂದು ಕೇಳುತ್ತಾರಂತೆ.

ಒಬ್ಬ ಉದ್ಯೋಗಿ ೫ ಕುಟುಂಬಗಳ ಜೊತೆ ವ್ಯವಹಾರ..!
ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಒಮ್ಮೆಗೆ ಗರಿಷ್ಠ ೫ ಕುಟುಂಬಗಳಿಗೆ ಬಾಡಿಗೆ ಸಂಬಂಧಿಯಾಗಿ ವ್ಯವಹರಿಸುವ ಅವಕಾಶವಿದೆ. ಆದರೆ ಸಂಸ್ಥೆಯ ಮಾಲೀಕನಾಗಿರುವುದರಿಂದ ಇಷಿ ಮಾತ್ರ ೨೫ ಕುಟುಂಬಗಳಿಗೆ ಬಾಡಿಗೆ ಸಂಬಂಧಿಯಾಗಿ ನಟಿಸುತ್ತಿದ್ದಾರೆ. ಆ ಕುಟುಂಬಗಳಿಂದ ಇಷಿ ಒಟ್ಟು ೬೯ ನಕಲಿ ಬಂಧುತ್ವಗಳನ್ನು ಹೊಂದಿದ್ದಾರಂತೆ..!
ಅಂದಹಾಗೆ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹಾಗೂ ಗ್ರಾಹಕರಿಗೆ ಕೆಲವು ಕಠಿಣ ಷರತ್ತುಗಳಿರುತ್ತವೆ. ಬಾಡಿಗೆ ಸಂಬಂಧಿಗಳು ಒಬ್ಬರ ಕೈ ಒಬ್ಬರು ಹಿಡಿಯಬಹುದು. ಆದರೆ ಮುತ್ತು ಇಡುವ ಹಾಗಿಲ್ಲ. ರತಿಕ್ರೀಡೆಯಲ್ಲೂ ಪಾಲ್ಗೊಳ್ಳುವಂತಿಲ್ಲ. ಹೀಗೆ ಹಲವು ಷರತ್ತುಗಳನ್ನು ವಿಧಿಸಲಾಗುತ್ತದೆ. ಅದನ್ನು ಒಪ್ಪಿದರೆ ಮಾತ್ರ ಕೆಲಸ ಸಿಗುತ್ತದೆ, ಗ್ರಾಹಕರಿಗೆ ಬಾಡಿಗೆ ಸಂಬಂಧಿ ಸಿಗುತ್ತಾರೆ.
ಈ ಫ್ಯಾಮಿಲಿ ರೊಮ್ಯಾನ್ಸ್‌ ಸಂಸ್ಥೆ ಒಟ್ಟು ೩೦ ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಅದರಲ್ಲಿ ಒಂದೊಂದು ಸೇವೆಗೂ ಒಂದೊಂದು ರೀತಿಯ ನೀತಿ, ನಿಯಮಗಳಿವೆ. ಗ್ರಾಹಕರು ನಾಲ್ಕು ಗಂಟೆಗಳ ಸೇವೆಗೆ ಬರೋಬ್ಬರಿ ೧೩ ಸಾವಿರ ರೂಪಾಯಿ ನೀಡಬೇಕು (೨೦ ಸಾವಿರ ಯೆನ್‌). ಪ್ರಯಾಣ, ಊಟದ ವೆಚ್ಚ ಪ್ರತ್ಯೇಕವಾಗಿ ನೀಡಬೇಕೆಂಬ ನಿಯಮವೂ ಇದೆ. ಸದ್ಯ ಜಪಾನ್‌ನಲ್ಲಿ ಈ ಬ್ಯುಸಿನೆಸ್‌ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

Share Post