ನಿಮ್ಮ ಮಾತು ಕೇಳಲು ʻಪಾಕಿಸ್ತಾನʼ ಏನು ನಿಮ್ಮ ಗುಲಾಮಗಿರಿಯಲ್ಲಿದೆಯೇ..?-ಇಮ್ರಾನ್ ಕಿಡಿ
ಪಾಕಿಸ್ತಾನ: ಉಕ್ರೇನ್‌ನಲ್ಲಿ ರಷ್ಯಾ ತನ್ನ ಯುದ್ಧವನ್ನು ಖಂಡಿಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿರುವ ಇಸ್ಲಾಮಾಬಾದ್‌ನಲ್ಲಿರುವ ಪಾಶ್ಚಿಮಾತ್ಯ ರಾಯಭಾರಿಗಳ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನ ನಿಮಗೆ “ಗುಲಾಮ” ಎಂದು ನೀವು ಭಾವಿಸುತ್ತೀರಾ? ಎಂದು ಕೆಂಡಾಮಂಡಲರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವಾರ ಪಾಶ್ಚಿಮಾತ್ಯ ರಾಯಭಾರಿಗಳು ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ಖಂಡಿಸುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿದರು. ಇದಕ್ಕೆ ಇಮ್ರಾನ್ ಖಾನ್ ಪ್ರತಿಕ್ರಿಯಿಸಿ ಪಾಕಿಸ್ತಾನ ನಿಮಗೆ ಗುಲಾಮ ಆಗಿದೆ ಅಂದುಕೊಂಡಿದ್ದೀರಾ? ಇದೇ ರೀತಿಯ ಹೇಳಿಕೆಗಳನ್ನು ನೀವು ಭಾರತಕ್ಕೆ ಕಳುಹಿಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಯುಎನ್ ಜನರಲ್ ಅಸೆಂಬ್ಲಿಯು ರಷ್ಯಾ ಉಕ್ರೇನ್ ಆಕ್ರಮಣವನ್ನು ಬಲವಾಗಿ ಖಂಡಿಸಿದ್ದರಿಂದ ಪಶ್ಚಿಮಾತ್ಯ ಮಿತ್ರದೇಶಗಳ ಪಾಕಿಸ್ತಾನವು ಮತದಾನದಿಂದ ದೂರವಿತ್ತು. ಉಕ್ರೇನ್ ವಿರುದ್ಧ ರಷ್ಯಾ ಯುದ್ಧದ ಸಮಯದಲ್ಲಿ ಇಮ್ರಾನ್ ರಷ್ಯಾಕ್ಕೆ ಭೇಟಿ ಕೂಡಾ ನೀಡಿದ್ದರು. ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ಯುದ್ಧವನ್ನು ಇಮ್ರಾನ್ ಸಮರ್ಥಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಎಲ್ಲಾಐರೋಪ್ಯ ಒಕ್ಕೂಟ ಸೇರಿದಂತೆ 22 ದೇಶಗಳ ರಾಯಭಾರಿಗಳು ಇದೇ ತಿಂಗಳ 1ರಂದು ಜಂಟಿ ಬಹಿರಂಗ ಪತ್ರವನ್ನು ಹೊರಡಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿರುದ್ಧ ವಿಶ್ವಸಂಸ್ಥೆಯ ನಿರ್ಣಯವನ್ನು ಬೆಂಬಲಿಸುವಂತೆ ಪತ್ರದಲ್ಲಿ ಪಾಕಿಸ್ತಾನವನ್ನು ಒತ್ತಾಯಿಸಲಾಗಿದೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಇಮ್ರಾನ್ ಖಾನ್ ಪಾಕಿಸ್ತಾನದ ಬಗ್ಗೆ ನೀವು ಏನು ಯೋಚಿಸುತ್ತೀರಿ? ನೀವು ಹೇಳಿದ ಹಾಗೆ ಮಾಡಲು ನಾವು ನಿಮ್ಮ ಗುಲಾಮರೇ? ಅಂತಹ ಪತ್ರವನ್ನು ನೀವು ಭಾರತಕ್ಕೆ ಬರೆಯುತ್ತೀರಾ..? ಎಂದು ಯುರೋಪಿಯನ್ ಒಕ್ಕೂಟವು ರಾಯಭಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ನಾವು ರಷ್ಯಾದೊಂದಿಗೆ ಅಮೆರಿಕದ, ಚೀನಾ ಮತ್ತು ಯುರೋಪ್‌ನೊಂದಿಗೆ ಸಹ ಒಡನಾಟ ಹೊಂದಿದ್ದೇವೆ. ನಾವು ಯಾವುದೇ ಒಂದು ವರ್ಗಕ್ಕೆ ಸೇರಿದವರಲ್ಲ ಎಂದು ಇಮ್ರಾನ್ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಶ್ರಮಿಸುತ್ತಿರುವವರ ಜೊತೆ ನಾವು ಕೆಲಸ ಮಾಡುತ್ತೇವೆ. ಅಫ್ಘಾನಿಸ್ತಾನದಲ್ಲಿ ಪಾಶ್ಚಿಮಾತ್ಯ ನ್ಯಾಟೋ ಮೈತ್ರಿಕೂಟಕ್ಕೆ ಬೆಂಬಲ ನೀಡಿದ ಕಾರಣ ಪಾಕಿಸ್ತಾನವು ನಷ್ಟವನ್ನು ಅನುಭವಿಸಿದೆ ಮತ್ತು ಕೃತಜ್ಞತೆಯ ಬದಲು ಟೀಕೆಗಳನ್ನು ಎದುರಿಸಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.