RUSSIA-UKRAINE WAR; ಯೂರೋಪಿಯನ್ ಒಕ್ಕೂಟದ ಸದಸ್ಯತ್ವಕ್ಕೆ ಉಕ್ರೇನ್ ಸಹಿ
ಕೀವ್: ರಷ್ಯಾ ಭೀಕರ ದಾಳಿ ನಡೆಸುತ್ತಿದ್ದರೂ ಹೆದರದ ಉಕ್ರೇನ್, ರಷ್ಯಾಗೆ ಸೆಡ್ಡು ಹೊಡೆಯುತ್ತಲೇ ಬರುತ್ತಿದೆ. ಉಕ್ರೇನ್ ಏನನ್ನು ಮಾಡಬಾರದು ಎಂದು ರಷ್ಯಾ ಬಯಸುತ್ತಿತ್ತೋ ಉಕ್ರೇನ್ ಅದನ್ನೇ ಮಾಡುತ್ತಿದೆ. ಹೌದು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಯುರೋಪಿಯನ್ ಒಕ್ಕೂಟದಲ್ಲಿ ತಮ್ಮ ದೇಶಕ್ಕೆ ಸದಸ್ಯತ್ವ ನೀಡುವ ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ಅಲ್ಲಿನ ಸಂಸತ್ ಹೇಳಿದೆ.
ಉಕ್ರೇನ್ ಸಂಸತ್ತಿನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಯುರೋಪಿಯನ್ ಒಕ್ಕೂಟದಲ್ಲಿ ಸದಸ್ಯತ್ವಕ್ಕಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ,ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಆಂಡ್ರಿ ಸೈಬಿಗಾ ಸಹಿ ಹಾಕಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‌ನ ಅಜ್ಞಾತ ಸ್ಥಳದಲ್ಲಿ ವೊಲೊಡಿಮಿರ್ ಸಹಿ ಹಾಕಿದ್ದು, ಯೂರೋಪಿಯನ್ ಒಕ್ಕೂಟ ತಕ್ಷಣವೇ ಸದಸ್ಯತ್ವ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸಂಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ರಷ್ಯಾ ದಾಳಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಯೂರೋಪಿಯನ್ ಒಕ್ಕೂಟದಲ್ಲಿ ಸದಸ್ಯತ್ವ ಬಯಸುತ್ತಿದ್ದೇವೆ. ಸಹಿ ಹಾಕಿದ ದಾಖಲೆಗಳನ್ನು ಬ್ರಸೆಲ್ಸ್‌ಗೆ ಕಳುಹಿಸುತ್ತಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.