UKRAINE WAR: ಭಾರತಕ್ಕೆ ವಿದ್ಯಾರ್ಥಿಗಳನ್ನು ತರಲು ಯತ್ನ; ರೊಮಾನಿಯಾಕ್ಕೆ ನಾಳೆ 2 ಏರ್ ಇಂಡಿಯಾ ವಿಮಾನಗಳು
ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಏರ್ ಇಂಡಿಯಾದ ಎರಡು ವಿಮಾನಗಳು ತೆರಳಲಿವೆ ಎಂದು ತಿಳಿದುಬಂದಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರೊಮಾನಿಯಾಗೆ ಕರೆತಂದು ಅಲ್ಲಿಂದ ವಿಮಾನದಲ್ಲಿ ಭಾರತಕ್ಕೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಏರ್ ಇಂಡಿಯಾ ರೊಮಾನಿಯಾದ ರಾಜಧಾನಿ ಬುಚರೆಸ್ಟ್‌ಗೆ ಎರಡು ವಿಮಾನಗಳ ಸಂಚಾರ ನಡೆಸಲಿದೆ.
ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಕೆಲ ವಿದ್ಯಾರ್ಥಿಗಳು ರಸ್ತೆ ಮಾರ್ಗದ ಮೂಲಕ ರೊಮಾನಿಯಾ ಗಡಿಯನ್ನು ತಲುಪಿದ್ದಾರೆ. ಅಧಿಕಾರಿಗಳು ಅವರೆಲ್ಲರನ್ನೂ ಬುಚರೆಸ್ಟ್‌ಗೆ ಕರೆತರಲಿದ್ದಾರೆ. ಬುಚರೆಸ್ಟ್‌ನಿಂದ ವಿಮಾನದಲ್ಲಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗುತ್ತದೆ.
ನಾಗರಿಕ ವಿಮಾನಗಳ ಸಂಚಾರಕ್ಕೆ ಉಕ್ರೇನ್‌ನ ವಾಯುಮಾರ್ಗವನ್ನು ಬಂದ್ ಮಾಡಲಾಗಿದೆ. ಈ ಕಾರಣದಿಂದ ಬುಚರೆಸ್ಟ್‌ನಿಂದ ಭಾರತೀಯರನ್ನು ಕರೆತರಲಾಗುತ್ತಿದೆ. ಏರ್ ಇಂಡಿಯಾದ ಎರಡು ವಿಮಾನಗಳು ಶನಿವಾರ ನಿರ್ಗಮಿಸಲಿವೆ ಎಂದು ತಿಳಿಸಿದ್ದಾರೆ. ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ರೊಮಾನಿಯಾದ ಗಡಿ ಭಾಗದ ನಡುವಿನ ಅಂತರ ಸುಮಾರು 600 ಕಿ.ಮೀ. ರಸ್ತೆಯ ಮೂಲಕ ಈ ಅಂತರವನ್ನು ಕ್ರಮಿಸಲು ಕನಿಷ್ಠ 8 ರಿಂದ 11 ಗಂಟೆಯ ಅವಧಿ ಬೇಕಾಗುತ್ತದೆ. ಗಡಿ ಭಾಗದಿಂದ ಬುಚರೆಸ್ಟ್‌ಗೆ ಅಂತರ ಸುಮಾರು 500 ಕಿ.ಮೀ ಆಗಲಿದ್ದು, ರಸ್ತೆಯ ಮೂಲಕ ಈ ಅಂತರವನ್ನು ಕ್ರಮಿಸಲು ಸುಮಾರು 9 ಗಂಟೆ ಬೇಕಾಗಲಿದೆ ಎಂದು ವಿವರಿಸಿದ್ದಾರೆ.