ಉಕ್ರೇನ್ ಪರ ಹೋರಾಡಲು ನಿಂತ ತಮಿಳುನಾಡಿನ ವಿದ್ಯಾರ್ಥಿ ಸೈನಿಕೇಶ್
ಚೆನ್ನೈ: ಪ್ರಬಲ ರಷ್ಯಾ ವಿರುದ್ಧ ಉಕ್ರೇನ್ ಕೂಡಾ ಶಕ್ತಿ ಮೀರಿ ಹೋರಾಡುತ್ತಿದೆ. ಉಕ್ರೇನ್ ಪರವಾಗಿ ನಿಲ್ಲಲು ಬೇರೆ ಬೇರೇ ದೇಶಗಳಲ್ಲಿ ನೆಲೆ ನಿಂತಿದ್ದ ಸಾವಿರಾರು ಉಕ್ರೇನ್ ಯುವಕರು ತಮ್ಮದೇಶದ ಪರವಾಗಿ ಹೋರಾಡಲು ಬಂದಿದ್ದಾರೆ. ಈ ನಡುವೆಯೇ ಉಕ್ರೇನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಮಿಳುನಾಡು ಮೂಲದ ವಿದ್ಯಾರ್ಥಿ ಸೈನಿಖೇಶ್ ರವಿಚಂದ್ರನ್ ಉಕ್ರೇನ್ ಸೇನೆಯನ್ನು ಸೇರಿಕೊಂಡಿದ್ದಾರೆ. ಉಕ್ರೇನ್ ಪ್ಯಾರಾ ಮಿಲಿಟರಿ ಪಡೆ ಸೇರಿರುವ ಸೈನಿಕೇಶ್, ರಷ್ಯಾ ವಿರುದ್ಧ ಹೋರಾಡುತ್ತಿದ್ದಾರೆಂದು ತಿಳಿದುಬಂದಿದೆ.
2018ರಲ್ಲಿ ಸೈನಿಕೇಶ್ ಹಾರ್ಕಿವ್‌ನ ನ್ಯಾಶನಲ್ ಏರೊಸ್ಪೇಸ್ ವಿಶ್ವವಿದ್ಯಾಲಯ ಸೇರಿದ್ದರು. ಇನ್ನೇನು ಜುಲೈಗೆ ಅವರ ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿತ್ತು. ಆದ್ರೆ ಈಗ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದೆ. ಈ ಹಿನ್ನೆಲೆಯಲ್ಲಿ ಸೈನಿಕೇಶ್ ಉಕ್ರೇನ್ ಸೈನ್ಯ ಸೇರಿಕೊಂಡು ಹೋರಾಡುತ್ತಿದ್ದಾರೆ. ಇತ್ತ ಚೆನ್ನೈನಲ್ಲಿರುವ ಪೋಷಕರಿಗೆ ಸೈನಿಕೇಶ್ ಸಂಪರ್ಕ ಸಿಗುತ್ತಿಲ್ಲ. ಹೀಗಾಗಿ ಪೋಷಕರು ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು. ಈ ವೇಳೆ ಸೈನಿಕೇಶ್ ಉಕ್ರೇನ್ ಸೈನ್ಯ ಸೇರಿರುವುದು ಗೊತ್ತಾಗಿದೆ. ಇನ್ನು ಸೈನಿಕೇಶ್ ಭಾರತದಲ್ಲೂ ಸೈನ್ಯ ಸೇರಲು ಪ್ರಯತ್ನಿಸಿದ್ದರಂತೆ. ಆದರೆ ಅವರು ಆಯ್ಕೆಯಾಗಿರಲಿಲ್ಲ ಎಂದು ಪೋಷಕರಿಂದ ಮಾಹಿತಿ ಸಿಕ್ಕಿದೆ.