ಮಿತಿಮೀರಿದ ತಾಲಿಬಾನಿಗಳ ಅಟ್ಟಹಾಸ: ಮಿಲಿಟರಿ ಅಧಿಕಾರಿಗೆ ಥಳಿತ
ಅಫ್ಘಾನಿಸ್ತಾನ: ತಾಲಿಬಾನಿಗಳು ಮನುಷ್ಯ ರೂಪದಲ್ಲಿರುವ ಕ್ರೂರ ಮೃಗಗಳಾಗಿದ್ದಾರೆ. ಆಪ್ಘಾನಿಸ್ತಾನದಲ್ಲಿ ಹಳೆ ಸರ್ಕಾರದ ಅಧಿಕಾರಿಗಳನ್ನು ಹಿಡಿದು ಮನಸೋ ಇಚ್ಛೆ ಥಳಿಸಿ, ದೈಹಿಕವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡ್ತಿದಾರೆ. ಸಿಕ್ಕ ಸಿಕ್ಕಲೆಲ್ಲಾ ಸೇನಾಧಿಕಾರಿಗಳು ಸೇರಿದಂತೆ ಹಳೆ ಸರ್ಕಾರದ ಅಧಿಕಾರಿಗಳಿಗೆ ಕಿರುಕುಳ ನೀಡಿ ವಿಕೃತಾನಂದವನ್ನು ಅನುಭವಿಸುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಪೋಸ್ಟ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆಗಸ್ಟ್ ೧೫ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವುದಕ್ಕೂ ಮೊದಲಿದ್ದ ಸರ್ಕಾರದ ಸೇನಾಧಿಕಾರಿ ರಹಮತ್ ಉಲ್ಲಾ ಖಾದರಿಯವರನ್ನು ತಾಲಿಬಾನಿಗಳು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ತಾಲಿಬಾನಿಗಳು ಅವರ ಜುಟ್ಟು ಹಿಡಿದು ಕೆನ್ನೆಗೆ ಮನಸೋ ಇಚ್ಛೆ ಥಳಿಸಿದ್ದಾರೆ.
ಸೇನಾಧಿಕಾರಿ ಅಂಗಲಾಚಿದರೂ ಬಿಡದೆ ಮುಖಕ್ಕೆ ಥಳಿಸಿ, ಕಾಲಿಂದ ಒದೆಯುತ್ತಿದ್ದಾರೆ. ಈ ವಿಡಿಯೋವನ್ನು ತನ್ನ ಟ್ವಿಟ್ಟರ್‌ನಲ್ಲಿ ತಾಜುಡೆನ್ ಸೊರೊಶ್ ಎಂಬುವವರು ಪೋಸ್ಟ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ತಾಲಿಬಾನಿಗಳು ಹೇಳುವುದು ಒಂದು..ಮಾಡುವುದು ಮತ್ತೊಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.