ಸುಡಾನ್ನಲ್ಲಿ ಭೀಕರ ಸಂಘರ್ಷಕ್ಕೆ 43 ಮಂದಿ ಬಲಿ..!
ಸುಡಾನ್: ಇಲ್ಲಿನ ವೆಸ್ಟ್ ದರ್ಫುರ್ ಪ್ರದೇಶದ ಜೆಬೆಲ್ ಮೂನ್ ಎಂಬದಲ್ಲಿ ಅರಬ್ ಅಲೆಮಾರಿಗಳು ಮತ್ತು ಮಿಸ್ಸೆರಿಯಾ ಜೆಬೆಲ್ ರೈತರ ನಡುವೆ ಭೀಕರ ಸಂಘರ್ಷ ನಡೆದಿದೆ. ಇದರಲ್ಲಿ ಸುಮಾರು 43 ಮಂದಿ ಕೊಲೆಯಾಗಿದ್ದಾರೆ. ಘಟನೆಯಲ್ಲಿ 46 ಹಳ್ಳಿಗಳಿಗೆ ಬೆಂಕಿ ಹಚ್ಚಿ, ಲೂಟಿ ಮಾಡಲಾಗಿದೆ.
ವರದಿಗಳ ಪ್ರಕಾರ ಸಂಘರ್ಷದಲ್ಲಿ 43 ಮಂದಿಯನ್ನು ಹತ್ಯೆ ಮಾಡಲಾಗಿದೆ. 46 ಹಳ್ಳಿಗಳು ಸಂಘರ್ಷಕ್ಕೆ ತುತ್ತಾಗಿ, ಸುಟ್ಟು ಬೂದಿಯಾಗಿವೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುಡಾನ್ನ ಮಾಜಿ ಅಧ್ಯಕ್ಷ ಓಮರ್ ಅಲ್ ಬಶೀರ್ ಅವರ ಕಾಲಾವಧಿ ಅಂದರೆ 2003ರಿಂದಲೂ ಈ ನಾಗರಿಕ ಸಂಘರ್ಷ ನಡೆಯುತ್ತಿದೆ. ಅವರು 2019 ಏಪ್ರಿಲ್ 11ರಂದು ಅವರು ಅಧಿಕಾರದಿಂದ ಕೆಳಗಿಳಿದರು. ಆದರೂ ಸಂಘರ್ಷ ಇನ್ನೂ ನಿಂತಿಲ್ಲ. 2020 ಅಕ್ಟೋಬರ್ 3 ರಂದು ದರ್ಫುರ್ ಪ್ರದೇಶದ ಸ್ಥಳೀಯರ ಜೊತೆ ಒಪ್ಪಂದ ಮಾಡಿಸಲಾಗಿತ್ತು. ಆ ಮೂಲಕ ಹೊಸ ಸರ್ಕಾರ ಸಂಘರ್ಷವನ್ನು ಕೊನೆಗೊಳಿಸುವ ಯತ್ನ ನಡೆಸಿತ್ತು. ಆದರೆ, ಇನ್ನೂ ಕೆಲ ಸಂಘಟನೆಗಳು ಒಪ್ಪಂದಕ್ಕೆ ಸಹಿಹಾಕಿಲ್ಲ.