ಮಳೆ ನೀರನ್ನು ಹೀರಿಕೊಳ್ಳುವ ನಗರಗಳಿವು..!
ಚೀನಾದ ಪ್ರೊಫೆಸರ್ ಯು-ಕೊಂಗ್ಜಿಯಾನ್ ಎಂಬುವವರು ಪ್ರವಾಹದ ಕಾರಣದಿಂದ ಒಮ್ಮೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತಂತೆ. ತನ್ನ ಮನೆ ಸಮೀಪದಲ್ಲಿನ ವೈಟ್ ಸ್ಯಾಂಡ್ ಕಣಿವೆ ಭಾರೀ ಮಳೆಯಿಂದಾಗಿ ಉಕ್ಕಿ ಹರಿದು, ಕೊಂಗ್ಜಿಯಾನ್ ಕುಟುಂಬ ಬೆಳೆದಿದ್ದ ಭತ್ತದ ಗದ್ದೆಯನ್ನು ಮುಳುಗಿಸಿಬಿಟ್ಟಿತ್ತು. ಆಗ ಕೊಂಗ್ಜಿಯಾನ್ ವಯಸ್ಸು ಕೇವಲ ೧೦ ವರ್ಷ. ನದಿಯಲ್ಲಿ ಉಕ್ಕಿ ಹರಿಯುತ್ತಿದ್ದ ನೀರನ್ನು ನೋಡಿ ಕೊಂಗ್ಜಿಯಾನ್ ಕುತೂಹಲದಿಂದ ಅಲ್ಲಿಗೆ ಹೋಗಿದ್ದರಂತೆ. ಆದರೆ ಇದ್ದಕ್ಕಿದ್ದಂತೆ ಅವರ ಪಾದಗಳ ಕೆಳಗಿದ್ದ ಭೂಮಿ ಕುಸಿದುಬಿಟ್ಟಿದೆ. ಆಗ ಜಾರಿಬಿದ್ದ ಕೊಂಗ್ಜಿಯಾನ್ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ.
ಆದರೆ ಅದೃಷ್ಟವಶಾತ್ ನದಿಯ ಇಕ್ಕೆಲೆಗಳಲ್ಲಿ ಪೊದೆಗಳು, ಗಿಡಗಳು ಹೆಚ್ಚಿದ್ದವು. ಕೊಂಗ್ಜಿಯಾನ್ ಅವುಗಳನ್ನು ಹಿಡಿದುಕೊಂಡು ಹೇಗೋ ಪ್ರಾಣಾಪಾಯದಿಂದ ಪಾರಾಗಿ ಬರುತ್ತಾರೆ. ಈಗಿನಂತೆ ನದಿಗಳಿಗೆ ತಡೆಗೋಡೆಗಳನ್ನು ನಿರ್ಮಿಸಿದ್ದಿದ್ದರೆ ಗ್ಯಾರೆಂಟಿ ಪ್ರಾಣ ಕಳೆದುಕೊಳ್ಳುತ್ತಿದ್ದೆ ಅಂತಾರೆ ಕೊಂಗ್ಜಿಯನ್..
ಈಗ ಇದೇ ಕೊಂಗ್ಜಿಯನ್ ಚೀನಾದ ನಗರ ನಿರ್ಮಾತೃಗಳಲ್ಲಿ ಅತ್ಯಂತ ಪ್ರಮುಖರಲ್ಲಿ ಒಬ್ಬರು. ಪೆಕಿಂಗ್ ಯೂನಿವರ್ಸಿಟಿಯಲ್ಲಿ ಆರ್ಕಿಟೆಕ್ಚರ್ ಅಂಡ್ ಲ್ಯಾಂಡ್‌ಸ್ಕೇಪ್ ಕಾಲೇಜ್‌ನಲ್ಲಿ ಡೀನ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರು ಚೀನಾದಲ್ಲಿನ ನಗರಗಳು ಪ್ರವಾಹಕ್ಕೆ ಸಿಲುಕದಂತೆ, ಮಳೆ ನೀರಿನಲ್ಲಿ ಮನೆಗಳು ಕೊಚ್ಚಿಕೊಂಡು ಹೋಗದಂತೆ ತಡೆಯಲು ಹೊಸ ಕಾನ್ಸೆಪ್ಟ್ ಒಂದನ್ನು ಅವರು ತಯಾರಿಸಿದ್ದಾರೆ. ಅದರ ಹೆಸರೇ ಸ್ಪಾಂಜ್ ಸಿಟಿ. ಪ್ರಪಂಚದ ಇತರ ದೇಶಗಳು ಕೂಡಾ ಈ ಕಾನ್ಸೆಪ್ಟ್ ಬಳಸಿಕೊಳ್ಳಬಹುದು ಎನ್ನುತ್ತಿದ್ದಾರೆ ಅವರು. ವಾತಾವರಣ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ಸ್ಪಾಂಜ್ ಸಿಟಿಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ..? ಜನರಿಗೆ ಎಷ್ಟು ಅನುಕೂಲವಾಗಲಿವೆ..? ಎಂಬುದರ ಬಗ್ಗೆಯೂ ಚರ್ಚೆಗಳು ಶುರುವಾಗಿವೆ.
ನೀರಿನೊಂದಿಗೆ ಯುದ್ಧ ಬೇಡ..!
ಪ್ರವಾಹವನ್ನು ನೋಡಿ ಭಯ ಬೀಳುವುದಕ್ಕಿಂತ ಅದನ್ನು ಒಪ್ಪಿಕೊಂಡು, ಅದನ್ನು ಆಲಂಗಿಸಿಕೊಂಡರೆ ಹೇಗಿರುತ್ತದೆ..? ಇದೇ ಪ್ರೊಫೆಸರ್ ಕೊಂಗ್ಜಿಯನ್ ಅವರ ಸ್ಪಾಂಜ್ ಸಿಟಿ ಹಿಂದೆ ಇರು ಸೂತ್ರ. ಸಂಪ್ರದಾಯ ಪದ್ದತಿಯಲ್ಲಿ ಮಳೆ ನೀರು ನಿರ್ವಹಣೆಗೆ ಪೈಪ್‌ಲೈನ್‌ಗಳು ಅಥವಾ ಕಾಲುವೆಗಳನ್ನು ನಿರ್ಮಿಸುತ್ತಾರೆ. ಇವುಗಳ ಮೂಲ ನೀರನ್ನು ಸಾಧ್ಯವಾದಷ್ಟು ವೇಗವಾಗಿ ಮುಂದಕ್ಕೆ ಕಳುಹಿಸುವುದು ಅಥವಾ ನದಿಗೆ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸುವುದು ಮಾಡುತ್ತಾರೆ. ಸದ್ಯಕ್ಕಿರುವ ಪರಿಹಾರಗಳು ಇವೇ. ಆದರೆ, ಒಂದು ಸ್ಪಾಂಜ್ ಸಿಟಿ ಇದಕ್ಕೆ ಭಿನ್ನವಾಗಿ ಕೆಲಸ ಮಾಡುತ್ತದೆ. ಮಳೆ ನೀರನ್ನು ತಡೆಯುತ್ತದೆ. ಜೊತೆಗೆ ಮೇಲ್ಮೈ ಹರಿವನ್ನು ನಿಧಾನಗೊಳಿಸುತ್ತದೆ.
ಇದು ಮೂರು ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊದಲ ವಿಧಾನದಲ್ಲಿ ಇದು ಅನೇಕ ರಂಧ್ರಗಳಿರುವ ಸ್ಪಾಂಜ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಅಂದರೆ ನಗರದಲ್ಲಿ ದೊಡ್ಡ ಪ್ರಮಾಣದ ಕೆರೆಗಳು ಅಥವಾ ಕುಂಟೆಗಳನ್ನು ಸ್ಥಾಪಿಸಲಾಗುತ್ತದೆ. ಅದರ ಮೂಲಕ ನೀರಿನ ಹರಿವನ್ನು ನಿಲ್ಲಿಸಲಾಗುತ್ತದೆ.
ಎರಡನೇ ವಿಧಾನದಲ್ಲಿ, ಮಳೆ ನೀರನ್ನು ಸರಳ ರೇಖೆ ರೀತಿಯ ನೇರ ಕಾಲುವೆಗಳ ಮೂಲಕ ವೇಗವಾಗಿ ಹೊರಗೆ ಕಳುಹಿಸುವ ಬದಲು, ತಿರುವುಗಳಿರುವ ಕಾಲುವೆಗಳನ್ನು ನಿರ್ಮಿಸಲಾಗುತ್ತದೆ. ಹಾಗೆಯೇ ಗಿಡಗಳನ್ನು ನೆಡುತ್ತಾರೆ. ಇದರಿಂದಾಗಿ ಪ್ರವಾಹದ ವೇಗ ಕಡಿಮೆಯಾಗುತ್ತದೆ.
ಮೂರನೆಯದು ತಗ್ಗುಪ್ರದೇಶಗಳು. ಇಲ್ಲಿಂದಲೇ ಕೆರೆಗಳು, ನದಿಗಳು, ಸಮುದ್ರಕ್ಕೆ ಮಳೆ ನೀರು ಹೋಗುವಂತೆ ನೋಡಿಕೊಳ್ಳಬೇಕು. ಇಂತಹ ಪ್ರದೇಶದಲ್ಲಿ ಯಾವುದೇ ನಿರ್ಮಾಣಗಳನ್ನು ಮಾಡಬಾರದು. ನಾವು ನೀರಿನೊಂದಿಗೆ ಹೋರಾಟ ಮಾಡಲು ಆಗುವುದಿಲ್ಲ. ಅದಕ್ಕೆ ಅಡ್ಡಿಯಾಗದಂತೆ ಹಾಗೆಯೇ ಬಿಟ್ಟುಬಿಡಬೇಕು ಎಂಬುದು ಕೊಂಗ್ಜಿಯನ್ ಅಭಿಪ್ರಾಯ.
ಇದೇ ಮೊದಲ ವಿಧಾನವಾ..?
ಬಹುತೇಕ ಇಂತಹ ವಿಧಾನಗಳೇ ಇತರ ಹಲವು ದೇಶಗಳಲ್ಲಿವೆ. ಆದರೂ, ಸ್ಪಾಂಜ್ ಸಿಟಿ ಕಲ್ಪನೆಯಲ್ಲಿ ಸಹಜತೆ ಹಾಗೂ ನೈಸರ್ಗಿಕತೆಯನ್ನು ಗುರುತಿಸಬಹುದು ಎಂದು ಸಿಂಗಾಪುರದ ನ್ಯಾಷನಲ್ ವಿಶ್ವವಿದ್ಯಾಲಯದ ವಿನ್ಯಾಸ ತಜ್ಞರಾದ ಡಾ.ನಿರ್ಮಲ್ ಕಿಷ್ನಾನಿ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ನಾವು ಪ್ರಕೃತಿಯೊಂದಿಗೆ ಡಿಸ್‌ಕನೆಕ್ಟ್ ಆಗಿದ್ದೇವೆ. ಪ್ರಕೃತಿಯೊಂದಿಗೆ ಒಂದು ಭಾಗವಾಗಿ ಬದಲಾಗುವುದಕ್ಕೆ ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದು ನಿರ್ಮಲ್ ಕಿಷ್ನಾನಿ ಹೇಳುತ್ತಾರೆ.
ಕಾಂಗ್ಜಿಯನ್ ಸ್ಪಾಂಜ್ ಸಿಟಿಯ ಪರಿಕಲ್ಪನೆ ಹೆಚ್ಚಾಗಿ ಪ್ರಾಚೀನ ಚೀನೀ ಕೃಷಿ ಪದ್ಧತಿಗಳನ್ನು ಹೋಲುತ್ತದೆ.
ಪ್ರೊಫೆಸರ್ ಕಾಂಗ್ಜಿಯನ್ ಈ ಹಿಂದೆ ಬೆಳೆಗಳಿಗೆ ಕೊಳಗಳಲ್ಲಿ ನೀರು ತುಂಬುವ ವಿಧಾನಗಳನ್ನು ಕಲಿತಿದ್ದಾರೆ. ಈ ವಿಧಾನಗಳನ್ನು ಅನುಸರಿಸಿ, ಪ್ರೊಫೆಸರ್ ಕಾಂಗ್ಜಿಯನ್ ಅವರ ಲ್ಯಾಂಡ್ ಸ್ಕೇಪಿಂಗ್ ಕಂಪನಿಯು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ.
ಕಾಂಗ್ಜಿಯನ್ ೧೭ ವರ್ಷದವರಿದ್ದಾಗ ಬೀಜಿಂಗ್‌ಗೆ ಬಂದು ಲ್ಯಾಂಡ್ ಸ್ಕೇಪಿಂಗ್ ಕೋರ್ಸ್ ಮಾಡುತ್ತಾರೆ. ನಂತರ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಡಿಸೈನಿಂಗ್‌ನಲ್ಲಿ ಪದವಿ ಪಡೆಯುತ್ತಾರೆ. ೧೯೯೭ರಲ್ಲಿ ಅವರು ಸ್ವದೇಶಕ್ಕೆ ಹಿಂತಿರಿಗಿದಾಗ, ಚೀನಾದಲ್ಲಿ ಬೇಕಾಬಿಟ್ಟಿ ಕಟ್ಟಡಗಳನ್ನು ನಿರ್ಮಾಣವಾಗುತ್ತಿರುವುದನ್ನುಗಮನಿಸುತ್ತಾರೆ.
ಇಲ್ಲಿ ವ್ಯರ್ಥವಾಗುತ್ತಿದ್ದ ಅನೇಕ ಸಂಪನ್ಮೂಲಗಳನ್ನು ಗಮನಿಸಿದ ಕೊಂಗ್ಜಿಯಾನ್, ಸಾಂಪ್ರದಾಯಿಕ ಚೀನೀ ಪರಿಕಲ್ಪನೆಗಳ ಆಧಾರದ ಮೇಲೆ ನಗರ ವಿನ್ಯಾಸ ನೀತಿಗಳನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು.
ಅವರು ಸ್ಪಾಂಜ್ ನಗರಗಳ ನಿರ್ಮಾಣದ ಜೊತೆಗೆ ನೈಸರ್ಗಿಕ ಲ್ಯಾಂಡ್ ಸ್ಕೇಪಿಂಗ್ ವ್ಯವಸ್ಥೆ ಅನುಸರಿಸುವಂತೆ ಕರೆ ನೀಡುತ್ತಾರೆ. ಇನ್ನು ಅತಿಯಾಗಿ ಅಲಂಕರಿಸಲಾದ ಉದ್ಯಾನವನಗಳನ್ನು ಮಹಿಳೆಯ ಕಾಲುಗಳನ್ನು ಸರಪಳಿಯಿಂದ ಕಟ್ಟಿಹಾಕುವ ಹಳೆಯ ಚೀನೀ ಸಂಪ್ರದಾಯಕ್ಕೆ ಕಾಂಗ್ಜಿಯನ್ ಹೋಲಿಸಿದರು. ಚೀನಾದ ತೀರಪ್ರಾಂತ್ಯದ ನಗರಗಳು, ಅದೇ ಪರಿಸ್ಥಿತಿಗಳಿರುವ ನಗರ ನಿರ್ಮಾಣಕ್ಕೆ ಸ್ಥಿರತ್ವ ಇಲ್ಲದ ಮಾಡೆಲ್‌ಗಳನ್ನು ಸ್ವೀಕರಿಸಿದ್ದಾರೆಂದು ಕಾಂಗ್ಜಿಯನ್ ಹೇಳಿದ್ದಾರೆ.
ದೇಶದ್ರೋಹಿ ಎಂಬ ಆರೋಪ
ಪ್ರಾರಂಭದಲ್ಲಿ ಕಾಂಗ್ಜಿಯನ್ ತ್ರಿ ಗೋರ್ಜೆಸ್ ರೀತಿಯ ಚೀನಾದ ಪ್ರತಿಷ್ಠಿತ ಪ್ರಾಜೆಕ್ಟ್‌ಗಳನ್ನು ಕೂಡಾ ವಿರೋಧಿಸಿ ಜನರ ವಿರೋಧಕ್ಕೆ ಕಾರಣರಾಗಿದ್ದರು. ಕಾಂಗ್ಜಿಯನ್ ಅವರ ಹಾರ್ವಡ್ ಹಿನ್ನೆಲೆ, ಪಾಶ್ಚತ್ಯ ದೇಶಗಳಿಂದ ಅವರಿಗೆ ಸಿಗುತ್ತಿದ್ದ ಪ್ರಶಂಸೆಗಳ ಕಾರಣದಿಂದ ಚೀನಾದ ಬಹುತೇಕರು ಅವರನ್ನು ಪಾಶ್ಚಾತ್ಯ ದೇಶಗಳ ಗೂಢಚಾರಿ ಎಂದೂ, ದೇಶದ್ರೋಹಿ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದರು.
ತಮ್ಮನ್ನು ತಾವು ಚೀನಾದಲ್ಲಿ ಸಾಂಸ್ಕೃತಿಕ ಕ್ರಾಂತಿಯ ಹರಿಕಾರ ಎಂದು ಬಿಂಬಿಸಿಕೊಳ್ಳುವು ಪ್ರೊಫೆಸರ್ ಕಾಂಗ್ಜಿಯನ್, ಜನರ ಟೀಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, ನಾನು ಪಾಶ್ಚಾತ್ಯನಾಗುವುದಕ್ಕೆ ಸಾಧ್ಯವೇ ಇಲ್ಲ, ನಾನು ಚೀನೀ ಸಾಂಪ್ರದಾಯವಾದಿ ಎಂದು ನಗುತ್ತಲೇ ಅವರು ಉತ್ತರಿಸುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಬೀಜಿಂಗ್, ವುಹಾನ್‌ಗಳಲ್ಲಿ ಸಂಭವಿಸಿದ ಪ್ರವಾಹದ ಸಮಯದಲ್ಲಿ ಅವರ ಆಲೋಚನೆಗಳಿಗೆ ಮೀಡಿಯಾದಿಂದ ಕೂಡಾ ಒಳ್ಳೆಯ ಸ್ಪಂದನೆ ಸಿಕ್ಕಿತ್ತು. ಹೀಗಾಗಿ ಸರ್ಕಾರ ಕೂಡಾ ಸ್ಪಾಂಜ್ ಸಿಟಿಗಳ ನಿರ್ಮಾಣಕ್ಕೆ ಆಸಕ್ತಿ ತೋರಿಸಿದೆ. ೨೦೧೫ರಲ್ಲಿ ಚೀನಾ ಅಧ್ಯಕ್ಷ ಚಿ ಜಿನ್‌ಷಿಂಗ್ ಸ್ಪಾಂಜ್ ಸಿಟಿ ಯೋಜನೆಗೆ ಭಾರಿ ಮಟ್ಟದ ನಿಧಿಯನ್ನು ಮೀಸಲಿರಿಸಿದ್ದಾರೆ. ೨೦೩೦ರ ಹೊತ್ತಿಗೆ ಶೇಕಡಾ ೮೦ರಷ್ಟು ಚೀನಾ ಮುನ್ಸಿಪಾಲಿಟಿಗಳು ಸ್ಪಾಂಜ್ ಸಿಟಿ ಮಾಡೆಲ್‌ಗೆ ಬದಲಾವಣೆಯಾಗಬೇಕಿರುತ್ತದೆ. ಕನಿಷ್ಠ ಶೇಕಡಾ ೭೦ರಷ್ಟು ಮಳೆ ನೀರನ್ನು ರೀಸೈಕಲಿಂಗ್ ಮಾಡಬೇಕಾಗುತ್ತದೆ.
ಮ್ಯಾಜಿಕ್ ಬುಲೆಟ್..?
ಪ್ರಪಂಚದಾದ್ಯಂತ ಅನೇಕ ಪ್ರಾಂತ್ಯಗಳು, ನಗರಗಳು ಭಾರಿ ಮಳೆಯ ಕಾರಣದಿಂದಾಗಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಈ ಪರಿಸ್ಥಿತಿಯನ್ನು ತಜ್ಞರು ಕ್ಲೈಮೇಟ್ ಚೇಂಜ್ ಎಂದು ಹೇಳುತ್ತಿದ್ದಾರೆ. ಭವಿಷ್ಯದಲ್ಲಿ ಮಳೆ ಮತ್ತಷ್ಟು ಜಾಸ್ತಿಯಾಗುತ್ತದೆ ಎಂಬುದಾಗಿಯೂ ತಜ್ಞರು ಹೇಳುತ್ತಿದ್ದಾರೆ. ಆದರೂ ಭಾರೀ ತುಫಾನ್‌ಗಳಿಗೆ ಸ್ಪಾಂಜ್ ಸಿಟಿ ಕಾನ್ಸೆಪ್ಟ್ ನಿಜವಾಗಿಯೂ ಪರಿಹಾರವಾಗುತ್ತದಾ..? ಈ ಪ್ರಶ್ನೆಗೆ ಖಚಿತವಾಗಿ ಹೇಳಲು ಆಗುವುದಿಲ್ಲ ಎಂಬ ಉತ್ತರ ಕೊಡುತ್ತಿದ್ದಾರೆ ತಜ್ಞರು.
ಸ್ಪಾಂಜ್ ಸಿಟಿ ಕಾನ್ಸೆಪ್ಟ್ ಬರೀ ಕಡಿಮೆ ಪ್ರಮಾಣದ ಮಳೆಗೆ ಮಾತ್ರ ಕೆಲಸ ಮಾಡುತ್ತದೆ. ಆದರೆ ಈಗ ನಾವು ನೋಡುತ್ತಿರುವ ಕುಂಭದ್ರೋಣ ಮಳೆಗೆ ಇನ್ನಷ್ಟು ಕಾಲುವೆಗಳನ್ನು ನಿರ್ಮಿಸಬೇಕಾಗುತ್ತದೆ. ಪೈಪ್‌ಲೈನ್‌ಗಳು, ಟ್ಯಾಂಕ್‌ಗಳ ನಿರ್ಮಾಣ ಕಾರ್ಯವೂ ಆಗಬೇಕಿದೆ ಎಂದು ತಜ್ಞರೊಬ್ಬರು ಹೇಳುತ್ತಾರೆ.