HealthLifestyleTechnology

ಬಾಟೆಲ್‌ ನೀರು ಕುಡಿದರೆ ಕ್ಯಾನ್ಸರ್‌ ಬರುತ್ತಾ..?

ಆಹಾರ ಪದಾರ್ಥಗಳ ಪ್ಯಾಕಿಂಗ್‌ನಲ್ಲಿ ಪ್ಲಾಸ್ಟಿಕ್‌ ಉಪಯೋಗಿಸುವುದರಿಂದ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆಂಬ ವಾದಗಳು ಕೇಳುತ್ತಲೇ ಇರುತ್ತೇವೆ. ಪ್ಲಾಸ್ಟಿಕ್‌ ಬಾಟಲಿಗಳನ್ನು ಬಿಸಿಲಿನಲ್ಲಿ ಇಟ್ಟಾಗ, ಅವುಗಳಿಂದ ಕ್ಯಾನ್ಸರ್‌ಗೆ ಕಾರಣವಾಗುವ ರಸಾಯನಿಕಗಳು ಬಿಡುಗಡೆಯಾಗುತ್ತವೆ. ಅವು ನೀರಿನಲ್ಲಿ ಸೇರಿ ನಮ್ಮ ದೇಹ ಸೇರಿ ಕ್ಯಾನ್ಸರ್‌ಗೆ ದಾರಿ ಮಾಡಿಕೊಡುತ್ತವೆ ಎಂಬ ಮಾಹಿತಿಯೊಂದು ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತಿದೆ. ಇದು ಒಂದು ವಿಶ್ವವಿದ್ಯಾಲಯ ನೀಡಿದ ವರದಿ ಎಂದು ಹೇಳಲಾಗಿದೆಯಾದರೂ, ಅದು ನಕಲಿ ಎಂಬುದು ಸಾಬೀತಾಗಿದೆ.
ಆತಂಕಕ್ಕೆ ಕಾರಣವಾಗಿರುವ ಬಿಪಿಎ ಎಂಬ ರಾಸಾಯನಿಕ..!
ಆದರೆ, ಶಾಸ್ತ್ರೀಯವಾಗಿ ಬಿಸ್‌ ಫಿನಾಲ್‌ ಎ (ಬಿಪಿಎ) ಎಂಬ ರಾಸಾಯನಿಕದ ಬಗ್ಗೆ ಕೆಲ ಆತಂಕಗಳಿವೆ. ಪಾಲಿ ಕಾರ್ಬೊನೇಟ್‌ ಕಂಟೈನರ್‌ಗಳು, ಫುಡ್‌ ಬಾಕ್ಸ್‌ ಲೈನಿಂಗ್‌ಗಳು, ರಸೀದಿಗಳು, ಸ್ಟಾಂಪ್‌ಗಳಿಗೆ ಉಪಯೋಗಿಸುವ ಕಾಗದದಲ್ಲಿ ಬಿಪಿಎ ರಸಾಯನಿಕ ಇರುತ್ತದೆ. ಬಿಪಿಎ ಒಂದು ಸ್ತ್ರೀ ಹಾರ್ಮೋನ್‌ ರೀತಿ ಪ್ರಭಾವ ಬೀರಿ ಹಾನಿ ಮಾಡಬಹುದು. ಆದರೆ, ಇದು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ ಎಂಬುದು ಇನ್ನೂ ಸಾಬೀತಾಗಿಲ್ಲ.

ಬಿಪಿಎ ಹಾನಿಕಾರಕ ಎಂಬುದಕ್ಕೆ ಯಾವುದಾದರೂ ಆಧಾರಗಳಿವೆಯೇ..?
ಬಿಪಿಎ ಅಧಿಕವಾಗಿ ತೆಗೆದುಕೊಂಡಾಗ, ಇಲಿಗಳು, ಅದರಲ್ಲೂ ಗರ್ಭ ಧರಿಸಿರುವ ಇಲಿಗಳು, ಸಣ್ಣ ಇಲಿಗಳಿಗೆ ಹೆಚ್ಚು ಹಾನಿಯಾಗುತ್ತದೆ ಎಂಬುದು ಸಂಶೋಧನೆಯಲ್ಲಿ ಸಾಬೀತಾಗಿದೆ ಎಂದು ಕೆಲವು ವರದಿಗಳು ಹೇಳುತ್ತವೆ. ಆದರೂ, ಮನುಷ್ಯರಲ್ಲಿ ಬಿಪಿಎ ನಂತಹ ರಸಾಯನಿಕಗಳು ಇಲಿಗಳಿಗಿಂತ ತುಂಬಾ ಭಿನ್ನವಾಗಿ ಜೀರ್ಣವಾಗುತ್ತವೆ. ಪ್ರಸ್ತುತ ಪ್ರತಿದಿನ ಮನುಷ್ಯನ ಶರೀರ ಸೇರುವ ಬಿಪಿಎ, ಹಾನಿಯನ್ನುಂಟು ಮಾಡುತ್ತಿದೆಯೋ, ಇಲ್ಲವೋ ಎಂದು ಹೇಳುವುದಕ್ಕೆ ಬಲವಾದ ಆಧಾರಗಳು ಯಾವುವೂ ಇಲ್ಲ. ಪ್ಯಾಕೇಜಿಂಗ್‌ನಲ್ಲಿ ಬಿಪಿಎ ಅನ್ನು ಹಲವಾರು ವರ್ಷಗಳಿಂದ ಉಪಯೋಗಿಸುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚಿನ ವಯಸ್ಸುಳ್ಳ ತುಂಬಾ ಜನರ ಮೂತ್ರದಲ್ಲಿ ಬಿಪಿಎ ಇರುವುದಾಗಿ ಅಂದಾಜಿಸಲಾಗಿದೆ. ಆದರೆ, ಪ್ಲಾಸ್ಟಿಕ್‌ ಪ್ಯಾಕೇಜಿಂಗ್‌ನಲ್ಲಿ ಬಿಪಿಎ ಯನ್ನು ಉಪಯೋಗಿಸದೇ ಇರುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ತುಂಬಾ ಪ್ಲಾಸ್ಟಿಕ್‌ ವಸ್ತುಗಳು ಮೇಲೆ ನಂಬರ್‌ ಒಂದನ್ನು ಮುದ್ರಿಸಲಾಗಿರುತ್ತದೆ. ಇದರ ಮೂಲಕ ಆ ವಸ್ತುಗಳಲ್ಲಿ ಬಿಪಿಎ ಇದೆಯೋ, ಇಲ್ಲವೋ ಎಂಬುದನ್ನು ಗುರುತಿಸಬಹುದು.

ಬಿಪಿಎಯನ್ನು ಹೇಗೆ ಗುರುತಿಸಬೇಕು..?
ನಾವು ಖರೀದಿ ಮಾಡುವ ಪ್ಲಾಸ್ಟಿಕ್‌ ವಸ್ತುಗಳ ಮೇಲೆ ತ್ರಿಭುಜಾಕಾರದ ಚಿಹ್ನೆಯ ಒಳಗೆ ನಂಬರ್‌ಗಳನ್ನು ಮುದ್ರಿಸಲಾಗಿರುತ್ತದೆ. ಅದ್ರಲ್ಲಿ ೧,೨,೪ ಅಥವಾ ೫ ನಂಬರ್‌ ಮುದ್ರಿಸಿದ್ದರೆ, ಅದು ಬಿಪಿಎ ರಹಿತ ಪ್ಲಾಸ್ಟಿಕ್‌ ಎಂದರ್ಥ. ಆದರೆ ೩ ಅಥವಾ ೭ ನಂಬರ್‌ ಮುದ್ರಿಸಿದ್ದರೆ ಅದ್ರಲ್ಲಿ ಬಿಪಿಎ ಇರಬಹುದು. ನೀವು ಪ್ಲಾಸ್ಟಿಕ್‌ಯನ್ನು ಬಿಸಿ ಮಾಡಿದರೆ ಅಥವಾ ಅದರಲ್ಲಿ ಡಿಟರ್ಜೆಂಟ್‌ ಹಾಕಿದರೆ, ಅದರಲ್ಲಿರುವ ಬಿಪಿಎ ಬಿಡುಗಡೆಯಾಗುತ್ತದೆ. ಪ್ಲಾಸ್ಟಿಕ್‌ ಮೇಲೆ ೬ ಸಂಖ್ಯೆ ಇದ್ದರೆ, ಅದು ಪಾಲಿಸ್ಟೈರಿನ್‌ನಿಂದ ತಯಾರು ಮಾಡಲಾಗಿರುತ್ತದೆ. ಯೂರೋಪಿಯನ್‌ ಯೂನಿಯನ್‌ನಲ್ಲಿ ಮಕ್ಕಳ ಸೀಸೆಗಳು, ಗೊಂಬೆಗಳ ತಯಾರಿಗಾಗಿ ಉಪಯೋಗಿಸುವ ಪ್ಲಾಸ್ಟಿಕ್‌ ಕಡ್ಡಾಯವಾಗಿ ಬಿಪಿಎ ರಹಿತವಾಗಿಯೇ ಇರಬೇಕು. ಆದರೆ, ಆಹಾರದ ಡಬ್ಬಿಗಳ ಲೈನಿಂಗ್‌ಗೆ, ಬಿಸಿಗೆ ಸ್ಪಂದಿಸುವ ರಸೀದಿಗಳಿಗೆ ಬಿಪಿಎ ಅಂಶ ಇದ್ದೇ ಇರುತ್ತದೆ. ಹೀಗಾಗಿ ಸಾಮಾನ್ಯ ನಮ್ಮ ಜೀವನದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಬಿಪಿಎ ನಮ್ಮ ಶರೀರ ಸೇರುತ್ತಲೇ ಇದೆ.

 

ಈ ಬಿಪಿಎ ನಿಂದಾಗಿ ಕ್ಯಾನ್ಸರ್‌ ಬರಬಹುದೆಂಬ ಆತಂಕ ಇದ್ದೇ ಇದೆ. ಹೀಗಾಗಿ, ಸಂಶೋಧಕರು ಈ ಬಗ್ಗೆ ಅಧ್ಯಯನದಲ್ಲಿ ತೊಡಗಿದ್ದಾರೆ. ಆದಷ್ಟು ಬಿಪಿಎ ರಹಿತ ಪ್ಲಾಸ್ಟಿಕ್‌ ಬಳಸುವಂತೆ ಸಲಹೆಗಳನ್ನು ನೀಡುತ್ತಿದ್ದಾರೆ. ಬಿಪಿಎನಿಂದ ಕ್ಯಾನ್ಸರ್‌ ಬರುತ್ತದೆ ಎಂಬುದಕ್ಕೆ ಇನ್ನೂ ಸೂಕ್ತ ಆಧಾರ ಸಿಕ್ಕಿಲ್ಲವಾದರೂ, ಜನರು ಬಿಪಿಎ ರಹಿತ ಪ್ಲಾಸ್ಟಿಕ್‌ ಬಳಸುವುದು ಸೂಕ್ತ ಎಂಬ ಅಭಿಪ್ರಾಯ ಸಂಶೋಧಕರದ್ದು.

Share Post