International

ಯುದ್ಧನೀತಿ ನಿಲ್ಲಿಸುವಂತೆ ರಷ್ಯಾಗೆ ವಿಶ್ವಸಂಸ್ಥೆ ಮನವಿ-ಪರಿಣಾಮಗಳಿಗೆ ರಷ್ಯಾ ನೇರ ಹೊಣೆ ಎಂದು ಬೈಡೆನ್

ಅಮೆರಿಕಾ:‌ ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ  ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯದ ಮನವಿಗಳನ್ನು ರಷ್ಯಾ ನಿರ್ಲಕ್ಷಿಸಿದೆ. ರಷ್ಯಾದ ಮಿಲಿಟರಿ ಈಗಾಗಲೇ ಡಾನ್ಬಾಸ್ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿ ಮಾಡಿದೆ. ಉಕ್ರೇನ್‌ನಲ್ಲಿ ರಷ್ಯಾ ಕೈಗೊಂಡಿರುವ ಯುದ್ಧನೀತಿಯನ್ನು ಯುನೈಟೆಡ್ ಸ್ಟೇಟ್ಸ್ ಬಲವಾಗಿ ಖಂಡಿಸಿದೆ.

ಯುಎಸ್ ಅಧ್ಯಕ್ಷ ಜೋ ಬೈಡೆನ್ ರಷ್ಯಾ ವಿರುದ್ಧ ತಿರುಗಿಬಿದ್ದಿದೆ. ಉಕ್ರೇನ್‌ನಲ್ಲಿ ಉಂಟಾಗುವ ದುಷ್ಪರಿಣಾಮಗಳಿಗೆ ಪುಟಿನ್ ಅವರೇ ಜವಾಬ್ದಾರರು ಎಂದು ಜೋ ಬೈಡೆನ್ ಎಚ್ಚರಿಕೆ ನೀಡಿದ್ದಾರೆ. 24 ಗಂಟೆಗಳಲ್ಲಿ ರಷ್ಯಾ ಉಕ್ರೇನ್ ಅನ್ನು ವಶಪಡಿಸಿಕೊಳ್ಳಲಿದೆ ಎಂಬ ಆತಂಕಕಾರಿ ವಿಚಾರವನ್ನು ಯುಎಸ್ ಹೇಳಿದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಸೇರಿದಂತೆ ಹಲವು ದೇಶಗಳು ಈಗಾಗಲೇ ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿವೆ, ಇತ್ತೀಚೆಗೆ, ಜಪಾನ್ ಪ್ರಧಾನಿ ಕೂಡ ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದರು. ಜಪಾನ್‌ನಲ್ಲಿ ರಷ್ಯಾ ಸರ್ಕಾರಿ ಬಾಂಡ್‌ಗಳ ವಿತರಣೆಯನ್ನು ನಿಷೇಧಿಸುವುದಾಗಿ  ಹೇಳಿದೆ.

ಉಕ್ರೇನ್‌ನ ಎರಡು ಬಂಡುಕೋರ ಪ್ರದೇಶಗಳಿಂದ ಬಂದವರ ವೀಸಾಗಳನ್ನು ಅಮಾನತುಗೊಳಿಸುವುದಾಗಿಯೂ ಹೇಳಿದೆ. ಆ ಪ್ರದೇಶಗಳ ವ್ಯಾಪಾರದ ಮೇಲೆ ನಿಷೇಧವನ್ನು ಘೋಷಿಸಿದೆ. ರಷ್ಯಾವು ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದೆ ಎಂದು ಆರೋಪ ಮಾಡಿದೆ.

ಆಸ್ಟ್ರೇಲಿಯಾ ಕೂಡ ಅದೇ ಹಾದಿಯಲ್ಲಿ ಸಾಗಿದೆ. ರಷ್ಯಾ ಭದ್ರತಾ ಮಂಡಳಿಯ ಎಂಟು ಸದಸ್ಯರ ಮೇಲೆ ನಿರ್ಬಂಧಗಳನ್ನು ವಿಧಿಸುವುದಾಗಿ ಘೋಷಣೆ ಮಾಡಿದೆ. ರಷ್ಯಾ ಕಂಪನಿಗಳು ರೋಸಿಯಾ ಬ್ಯಾಂಕ್, ಪ್ರಾಮ್ಸ್ ವಾಜ್ ಬ್ಯಾಂಕ್, ಐಎಸ್ ಬ್ಯಾಂಕ್, ಝೆನ್ ಬ್ಯಾಂಕ್ ಮತ್ತು ಅಭಿವೃದ್ಧಿ ಪುನರ್ನಿರ್ಮಾಣಕ್ಕಾಗಿ ಕಪ್ಪು ಸಮುದ್ರ ಬ್ಯಾಂಕ್ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಸ್ಪಷ್ಟಪಡಿಸಿವೆ.

ಇತ್ತ ಚೀನಾ ಅಮೆರಿಕದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉಕ್ರೇನ್-ರಷ್ಯಾ ಸಂಘರ್ಷದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಭಯವನ್ನು ಹರಡುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ತಿಳಿಸಿದ್ದಾರೆ.  ರಷ್ಯಾದ ಮೇಲೆ ನಿರ್ಬಂಧ ಹೇರಿರುವುದನ್ನು ಚೀನಾ ತೀವ್ರವಾಗಿ ಖಂಡಿಸಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ ಎಂದು ಚೀನಾ ಆರೋಪ ಮಾಡಿದೆ.

Share Post