ಪ್ರಧಾನಿ ನರೇಂದ್ರ ಮೋದಿ 3 ದೇಶಗಳ ಪ್ರವಾಸ; ಜರ್ಮನಿ ತಲುಪಿದ ಪ್ರೈಮ್‌ಮಿನಿಸ್ಟರ್
ಬರ್ಲಿನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರು ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಇಂದು ಅವರು ಜರ್ಮನಿಗೆ ಆಗಮಿಸಿದ್ದಾರೆ. ಇಂದಿನಿಂದ ಅವರು ಯುರೋಪ್‌ನ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ರಾಷ್ಟ್ರಗಳ ಪ್ರವಾಸ ನಡೆಸಲಿದ್ದಾರೆ. ಇಂದು ಅವರು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಬರ್ಲಿನ್‌ನಲ್ಲಿ ಭೇಟಿಯಾಗಲಿದ್ದಾರೆ. ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ಮೇ 3–4 ರಂದು ನಡೆಯುವ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ಅನಂತರ ಭಾರತ-ನಾರ್ಡಿಕ್ ಎರಡನೇ ಶೃಂಗಸಭೆಯಲ್ಲಿ ಕೂಡಾ ಪಾಲ್ಗೊಳ್ಳಲಿದ್ದಾರೆ.
ಯುರೋಪ್ ಹಲವು ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಯುರೋಪಿಯನ್ ಪಾಲುದಾರರೊಂದಿಗೆ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಈ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತ ಮತ್ತು ಜರ್ಮನಿ ನಡುವಿನ ದೀರ್ಘಾವಧಿಯ ವಾಣಿಜ್ಯ ಸಂಬಂಧಗಳು ಕಾರ್ಯತಂತ್ರದ ಪಾಲುದಾರಿಕೆಯ ಆಧಾರ ಸ್ತಂಭಗಳಲ್ಲಿ ಒಂದಾಗಿವೆ. ಉದ್ಯಮ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಚಾನ್ಸೆಲರ್ ಸ್ಕೋಲ್ಜ್ ಅವರೊಟ್ಟಿಗೆ ವಾಣಿಜ್ಯ ಕ್ಷೇತ್ರದ ದುಂಡುಮೇಜಿನ ಸಭೆಯಲ್ಲಿ ಮಾತನಾಡಲಾಗುವುದು ಎಂದು ಮೋದಿ ತಿಳಿಸಿದ್ದರು.